ಸಕ್ಕರೆ ಕಾರಖಾನೆಗಳ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚು ಬೆಲೆ ಪಾವತಿಸಲಾಗಿದೆ : ಪರಪ್ಪ ಸವದಿ

ಅಥಣಿ 19: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಇತ್ತೀಚಿನ  ವರ್ಷಗಳ ಅವಧಿಯಲ್ಲಿ ಅಥಣಿ ತಾಲೂಕಿನ 5 ಸಕ್ಕರೆ ಕಾರಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚು ಬೆಲೆ ಪಾವತಿಸಲಾಗಿದೆ ಎಂದು ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.  ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 32 ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.         

2023-24 ನೇ ಸಾಲಿನ ಹಂಗಾಮಿನಲ್ಲಿ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ ನಮ್ಮ ಕಾರಖಾನೆಯಿಂದ ಕೇಂದ್ರ ಸರಕಾರ ನಿಗದಿ ಪಡಿಸಿದ ಎಫ್‌.ಆರಿ​‍್ಪ ದರಕ್ಕಿಂತ ಹೆಚ್ಚಿನ ಬಿಲ್ಲನ್ನು ನಿಗದಿತ ಅವಧಿಯಲ್ಲಿಯೇ ಪಾವತಿಸಲಾಗಿದೆ.   

 ಎಂದ ಅವರು ಸಾಕಷ್ಟು ಪೈಪೋಟಿ ಇದ್ದರೂ ಕೂಡ ನಮ್ಮ ಕಾರಖಾನೆಯ ಆಡಳಿತ ಮಂಡಳಿಯು ತನ್ನದೇ ಆದ ಮುಂಧೋರಣೆಯನ್ನು ರೂಪಿಸಿಕೊಂಡು ಪ್ರಗತಿ ಪಥದತ್ತ ಕೊಂಡೋಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.         

ಪ್ರತಿ ವರ್ಷದಂತೆ ಶೇರು ಸದಸ್ಯರಿಗೆ ಪ್ರತಿ ಶೇರಿಗೆ 50  ಕೆ.ಜಿ ಹಾಗೂ ಕಬ್ಬು ಪೂರೈಕೆದಾರರಿಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಮನಂತೆ ಮತ್ತು ಕಾರಖಾನೆಯ ಸಿಬ್ಬದಿ, ಕಾರ್ಮಿಕರಿಗೆ 25 ಕೆ.ಜಿಯಂತೆ ಪ್ರತಿ ಕಿಲೋ ಗೆ  ರಿಯಾಯತಿ ದರ 20 ರೂ.ಗಳಂತೆ ವಿತರಿಸಲಾಗುವುದು ಎಂದ ಅವರು ನಮ್ಮ ಕಾರಖಾನೆಗೆ 2023-24 ಸಾಲಿನಲ್ಲಿ 65, 86, 666 ರೂ.ಗಳಷ್ಟು ನಿವ್ವಳ ಲಾಭವಾಗಿದ್ದು, ಮುಂಬರುವ ಹಂಗಾಮಿನಲ್ಲಿ ಉತ್ತಮ ಇಳುವರಿಯುಳ್ಳ ಕಬ್ಬನ್ನು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.        

ರೈತ ಹಿತ ಕಾಯುವ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಅಥಣಿ ತಾಲೂಕಿನ ರೈತರು ಉತ್ತಮ ಗುಣ ಮಟ್ಟದ ಕಬ್ಬನ್ನು ಪೂರೈಸಿ ಕಾರಖಾನೆಯ ಬೆಳವಣಿಗೆಗೆ ಸಹಕರಿಸಬೇಕು ಎಂದ ಅವರು ಕಳೆದ ಹಂಗಾಮಿನಲ್ಲಿ 5,60,917 ಟನ್ ಕಬ್ಬು ನುರಿಸಿ 10.96 ಇಳುವರಿ ಮೂಲಕ 608000  ಕ್ವಿಂಟಾಲ್ ಸಕ್ಜರೆ ಉತ್ಪಾದಿಸಲಾಗಿದೆ ಜೊತೆಗೆ 3 ಕೋಟಿ 63 ಲಕ್ಷ 34 ಸಾವಿರದಷ್ಟು ಯುನಿಟ್ಸ ವಿದ್ಯುತ್  ಉತ್ಪಾದಿಸಲಾಗಿದೆ ಎಂದು ಹೇಳಿದರು.   

ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್‌.ಪಾಟೀಲ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ಧರಿಸುವ ಕಬ್ಬಿನ ದರದ ಆಧಾರದಲಿಯೇ ಬೆಳಗಾವಿ, ಬಾಗಲಕೋಟ  ಮತ್ತು ವಿಜಯಪುರ ಜಿಲ್ಲೆಗಳ ಸಕ್ಕರೆ ಕಾರಖಾನೆಗಳ ದರ ನಿರ್ಧಾರ ಆಗುತ್ತದೆ ಹೀಗಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಮೂರು ಜಿಲ್ಲೆಗಳ ಕಾರಖಾನೆಯಾಗಿದೆ ಎಂದರು.  

ಸಕ್ಕರೆ ದರದಲ್ಲಿ ಕುಸಿತವಾಗಿದ್ದರೂ  ಕೂಡ ನಮ್ಮ ಕಾರಖಾನೆ ರೈತರಿಗೆ ಒಳ್ಳೆಯ ದರ ನೀಡಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಇತರ ಎಲ್ಲ ಖಾಸಗಿ ಕಾರಖಾನೆಗಳಿಗಿಂತ  ರೈತರಿಗೆ  ಹೆಚ್ಚು ದರ ನೀಡುತ್ತೇವೆ ಎಂದು ಹೇಳಿದರು.     ಸಭೆಯಲ್ಲಿ ರೈತ ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಕೇಳಿದ ಲಿಖಿತ  ಪ್ರಶ್ನೆಗಳಿಗೆ   ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ  ಜಿ.ಎಮ್‌.ಪಾಟೀಲ ಉತ್ತರಿಸಿದರು. ಸಭೆ ನಡುವಳಿಕೆಯನ್ನು ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ಓದಿದರು, ಮುಖ್ಯ ಲೆಕ್ಕಾಧಿಕಾರಿ ಎ.ಸಿ.ರಾಚಪ್ಪನವರ 2024-25 ನೇ ಸಾಲಿನ ಅಂದಾಜು ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.   

ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ. ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಶ್ರೀಮತಿ ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಶ್ರೀಮತಿ ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ  ಗೋಟಖಿಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ, ಪಿ.ಸಿ.ಪಾಟೀಲ ಸೇರಿದಂತೆ  ಕಾರಖಾನೆಯ ವಿಭಾಗಾಧಿಕಾರಿಗಳು, ರೈತ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.