ಶಾಸಕ ಎನ್ ಮುನಿರತ್ನ ಅವರಿಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು 19: ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಬಿಜೆಪಿ ಶಾಸಕ ಎನ್ ಮುನಿರತ್ನ ಅವರಿಗೆ ಶಾಸಕರು/ಸಂಸದರ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಮುನಿರತ್ನ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಎರಡು ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸಬಾರದು, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿ  ಜಾಮೀನು ನೀಡಿದ್ದಾರೆ.

ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಮುನಿರತ್ನ ಪರ ವಕೀಲರು ಜಾಮೀನು ಷರತ್ತು ಪೂರೈಸುತ್ತಿದ್ದು, ಇಂದು ಸಂಜೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಜೈಲಿನಿಂದ ಬಿಡುಗಡೆಯಾದರೂ ಸಹ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ ಇದೆ.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಕಿರುಕುಳ ನೀಡಿರುವುದು, ಜಾತಿ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದಾಖಲಾದ ನಂತರ ಸೆಪ್ಟೆಂಬರ್ 14 ರಂದು ಕೋಲಾರದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು.