ಬೆಂಗಳೂರು, ಸೆ 8 ಬೆಂಗಳೂರು ನಗರ ಇಂದು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ನಗರವಾಗಿದ್ದು, ಅದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಭಾನುವಾರ ಬೆಂಗಳೂರು ನಗರ ಪರಿವೀಕ್ಷಣೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪರಿವೀಕ್ಷಣೆ ಸಂದರ್ಭದಲ್ಲಿ ಬನ್ನೇರುಘಟ್ಟ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಕಾಡುಬೀಸನಹಳ್ಳಿ, ಮಾರತಹಳ್ಳಿ, ಟಿನ್ಫ್ಯಾಕ್ಟರಿ, ಭಾಗಗಳಲ್ಲಿ ಪರಿವೀಕ್ಷಣೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಬನ್ನೇರುಘಟ್ಟ ರಸ್ತೆಯ ಮೆಟ್ರೋ ಮೇಲುಸೇತುವೆ, ಮಾತೇನಹಳ್ಳಿ ರಸ್ತೆಯಲ್ಲಿ ಮೆಟ್ರೋ ಮತ್ತು ರಸ್ತೆ ಕಾಮಗಾರಿ, ಜಯದೇವ ಆಸ್ಪತ್ರೆ ಜಂಕ್ಷನ್ ಮೆಟ್ರೋ ನಿಲ್ದಾಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗಿದೆ. 2021ರೊಳಗೆ ಇಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸೇವೆ ಪ್ರಾರಂಭಿಸುವ ಗುರಿಯೊಂದಿಗೆ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದರು. ಮೆಟ್ರೋ ಕಾಮಗಾರಿ ನಡೆಸುವ ಸ್ಥಳಗಳಲ್ಲಿ ರಸ್ತೆ ಮತ್ತು ಫುಟ್ಪಾತ್ಗಳ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಚಾರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಪಯರ್ಾಯ ರಸ್ತೆಗಳನ್ನು ಗುರುತಿಸಿ, ಅವುಗಳನ್ನು ಸುಸ್ಥಿತಿಯಲ್ಲಿಡುವಂತೆ ಹಾಗೂ ಒತ್ತುವರಿಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯಿಂದ ಬರುವ ಜಲಮಂಡಳಿಯ ಸ್ಯಾನಿಟರಿ ಪಂಪಿಂಗ್ ಲೈನ್ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ನಂತರ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಭೇಟಿ ನೀಡಲಾಯಿತು. ಅಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಿರುವ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ನಗರದ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಜಂಕ್ಷನ್ಗಳಲ್ಲಿ ಇದು ಒಂದಾಗಿದ್ದು, ಆದ್ದರಿಂದ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವೈಟ್ಫೀಲ್ಡ್ ಕಾರಿಡಾರ್ನ ಕೆ.ಆರ್.ಪುರಂ ನಲ್ಲಿ ಮೆಟ್ರೋ ಕಾಮಗಾರಿಗಳನ್ನು ಪರಿಶೀಲಿಸಿದ್ದು, ಔಟರ್ ರಿಂಗ್ ರಸ್ತೆ ಮತ್ತು ಓಲ್ಡ್ ಮದ್ರಾಸ್ ರಸ್ತೆ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಬಸ್, ರೈಲ್ವೆ ಹಾಗೂ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು ರೂಪಿಸಿರುವ ಯೋಜನೆಯ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಸವಿವರವಾದ ಯೋಜನಾ ವರದಿ ಸಿದ್ಧಪಡಿಸಿ, ಸರ್ಕಾರದ ಅನುಮೋದನೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವೈಟ್ಫೀಲ್ಡ್ ಮೆಟ್ರೋ ಲೈನ್ ಕಾಮಗಾರಿಯನ್ನು 2021ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಬ್ಬಾಳ ಜಂಕ್ಷನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಬ್ಬಾಳದಲ್ಲಿ ಮೇಲು ಸೇತುವೆಗೆ 5 ಲೇನ್ ಸೇರ್ಪಡೆ ಮತ್ತು ಅಂಡರ್ ಪಾಸ್ ನಿರ್ಮಾಣದ ಕುರಿತು ರೈಟ್ಸ್ ಸಂಸ್ಥೆಯವರು ಅಧ್ಯಯನ ನಡೆಸುತ್ತಿದ್ದಾರೆ. ಈ ಅಧ್ಯಯನ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಸಿಲ್ಕ್ ಬೋಡ್ನರ್ಿಂದ ಕೆ.ಆರ್.ಪುರ, ಹೆಬ್ಬಾಳ ಮೂಲಕ ನಿರ್ಮಿಸಲಾಗುತ್ತಿರುವ ಔಟರ್ ರಿಂಗ್ ರಸ್ತೆ- ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ಕುರಿತು ಸಹ ಚರ್ಚಿಸಲಾಗಿದೆ. ಒಟ್ಟು 56 ಕಿ.ಮೀ. ಉದ್ದದ ಕಾರಿಡಾರ್ನಲ್ಲಿ ಭೂಸ್ವಾಧೀನ ಹಾಗೂ ಮೂಲಸೌಕರ್ಯಗಳ ಸ್ಥಳಾಂತರಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದಿನ ಎರಡು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ಪಡೆದುಕೊಳ್ಳಲು ಸರ್ಕಾರ ಕ್ರಮ ವಹಿಸಲಿದೆ. ಕುಂದಲಹಳ್ಳಿ ಜಂಕ್ಷನ್ನಲ್ಲಿ ಬಿಬಿಎಂಪಿಯಿಂದ ಅಂಡರ್ ಪಾಸ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದರು. ಕುಂದಲಹಳ್ಳಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯವಿರುವ 45 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಕಾಡುಬೀಸನಹಳ್ಳಿಯಲ್ಲಿ ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಪ್ರತಿನಿಧಿಗಳ ಜೊತೆ ಸಂಚಾರ ಸಮಸ್ಯೆ ಮತ್ತು ಇತರ ಮೂಲಸೌಕರ್ಯಗಳ ಸಮಸ್ಯೆಗಳನ್ನು ಕುರಿತಾಗಿ ಚರ್ಚಿಸಿದ್ದೇವೆ. ಕೆ.ಆರ್.ಪುರ ಮತ್ತು ಸಿಲ್ಕ್ಬೋರ್ಡ್ ಜಂಕ್ಷನ್ ಟ್ರಾಫಿಕ್ ಜಾಮ್ನಿಂದ ಸಾಫ್ಟ್ ವೇರ್ ಕಂಪೆನಿಗಳಿಗೆ ಪ್ರತಿವರ್ಷ 1000 ಕೋಟಿ ರೂ. ನಷ್ಟವಾಗುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ರಸ್ತೆಗಳ ವಿಸ್ತೀರ್ಣ ಸಾಕಾಗುತ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯನ್ನು ವೇಗವಾಗಿ ಮಾಡಲು ಸೂಚನೆ ನೀಡಿದ್ದೇನೆ. ಅಲ್ಲದೆ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಶೀಘ್ರವೇ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು. ರಸ್ತೆಗಳ ಅಭಿವೃದ್ಧಿಗೆ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 200 ಕೋಟಿ ರೂ. ಒದಗಿಸಲಾಗಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ನಗರದ ಒಂದೊಂದು ಭಾಗಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಿದ್ದೇನೆ. ಒಟ್ಟಾರೆಯಾಗಿ ನಗರವನ್ನು ಮುಂದಿನ ದಿನಗಳಲ್ಲಿ ವಿಶ್ವದರ್ಜೆಯ ನಗರವಾಗಿ ರೂಪಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ನಗರದ ಸಮಸ್ಯೆಗಳನ್ನು, ವಸ್ತುಸ್ಥಿತಿಯನ್ನು ಅರಿಯಲು ನಾನು ಇಂದು ಬೆಳಿಗ್ಗೆಯಿಂದ ಸುಮಾರು ಮೂರು-ನಾಲ್ಕು ಗಂಟೆಗಳ ಕಾಲ ನಗರ ಪರಿವೀಕ್ಷಣೆ ನಡೆಸಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಭಾನುವಾರ ರಜಾ ದಿನ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಎಂದರು. ಯಡಿಯೂರಪ್ಪ ಅವರ ಜೊತೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ಅರವಿಂದ ಲಿಂಬಾವಳಿ, ಎಸ್. ರಘು, ಸತೀಶ್ ರೆಡ್ಡಿ, ನನ್ನ ಸಲಹೆಗಾರರಾದ ಎಂ. ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಬಿಡಿಎ, ಜಲಮಂಡಳಿ ಅಧಿಕಾರಿಗಳು, ಬಿಎಂಆರ್ ಸಿಎಲ್ ಅಧಿಕಾರಿಗಳು ನಗರ ಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.