ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜ.28ರವರೆಗೆ ಹೈ ಅಲರ್ಟ್

ಬೆಂಗಳೂರು, ಜ. 21, ಮಂಗಳೂರಿನ ಬಜ್ಪೆ ವಿಮಾನದಲ್ಲಿ ಸಜೀವ ಬಾಂಬ್ ಪತ್ತೆಯಾದ  ಹಿನ್ನೆಲೆಯಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈ  ಅಲರ್ಟ್ ಘೋಷಿಸಲಾಗಿದ್ದು, ಇದೇ ತಿಂಗಳು 28ರವರೆಗೆ ವಿಮಾನ ನಿಲ್ದಾಣದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಭದ್ರತೆಗಾಗಿ ಕೆಪಿಎಲ್ ಬಳಿಯ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ, ಶ್ವಾನ ದಳ, ಕೆಎಸ್‌ಆರ್‌ಪಿ ತುಕಡಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.  ಇನ್ನು, ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿಯೂ ನಿನ್ನೆ ಸಜೀವಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಏರ್ ಪೋರ್ಟ್ ಗೆ ಆಗಮಿಸುವ ಹಾಗೂ ನಿರ್ಗಮಿಸುತ್ತಿರುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಅಲ್ಲದೇ, ಎಲ್ಲಾ ವಾಹನಗಳ ಸಂಖ್ಯೆ ಹಾಗೂ ಚಾಲಕನ ಹೆಸರು ಸಹ ನಮೂದಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಮಂಗಳೂರು  ವಿಮಾನ‌‌ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅಮಾನಧೇಯ ವ್ಯಕ್ತಿಯೊಬ್ಬ ಲ್ಯಾಪ್ ಟಾಪ್  ಬ್ಯಾಗ್ ನಲ್ಲಿ ಸಜೀವ ಬಾಂಬ್ ಇಟ್ಟು ಪರಾರಿಯಾಗಿದ್ದರಿಂದ ಇಡೀ ರಾಜ್ಯವೇ  ಬೆಚ್ಚಿಬಿದ್ದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.