ಬೆಂಗಳೂರು, ಆ 30 ಜಾರಿನಿರ್ದೇಶಾನಲಯ (ಇಡಿ) ಸಮನ್ಸ್ ಜಾರಿ ಹಾಗೂ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ನಿಲ್ಲುವಂತೆ ಪಕ್ಷದ ಹೈಕಮಾಂಡ್ ಆದೇಶಿಸಿದೆ.
2017 ರಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಿಂದ ಬಚಾವ್ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ನಿರ್ಣಾಯಕ ಪಾತ್ರವಹಿಸಿದ್ದರು. ಹೈಕಮಾಂಡ್ ಸೂಚನೆಯ ಮೇರೆಗೆ ಶಾಸಕರನ್ನು ರೆಸಾರ್ಟ್ನಲ್ಲಿಟ್ಟು ಬಿಜೆಪಿಯಿಂದ ರಕ್ಷಿಸುವ ಪ್ರಯತ್ನ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಡಿಕೆಶಿ ಹಾಗೂ ಅವರ ಬೆಂಬಲಿಗರ ಆಸ್ತಿ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಐಟಿ ದಾಳಿ ಹಿನ್ನೆಲೆಯಲ್ಲಿ ಜಾರಿನಿರ್ದೇಶನಾಲಯ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಶಿವಕುಮಾರ್ ವಿಚಾರಣೆಯಲ್ಲಿ ಸಮರ್ಪಕ ಉತ್ತರ ನೀಡದಿದ್ದಲ್ಲಿ ಬಂಧನವೂ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ಮರೆತು ಶಿವಕುಮಾರ್ ಅವರ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ನ ಎಲ್ಲಾ ನಾಯಕರು ನಿಲ್ಲುವಂತೆ ಹೈಕಮಾಂಡ್ ಸೂಚಿಸಿದೆ.
ಜಾರಿನಿರ್ದೇಶನಾಲಯ ವಿಚಾರಣೆ ಮುಂದೆ ಹಾಜರಾಗಲು ಮಾಜಿ ಸಚಿವ ಡಿ ಕೆ ಶಿವಕುಮಾರ್ ಶುಕ್ರವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದಾರೆ
ಮಧ್ಯಾಹ್ನ 1 ಗಂಟೆಗೆ ತುರ್ತು ವಿಚಾರಣೆಗೆ ಹಾಜರಾಗುವಂತೆ ಗುರುವಾರ ರಾತ್ರಿ ಡಿಕೆಶಿ ಅವರಿಗೆ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಕುಟುಂಬದ ಪೂರ್ವನಿಯೋಜಿತ ಹಾಗೂ ವೈಯಕ್ತಿಕ ಕೆಲಸದ ನಿಮಿತ್ತ ನಿಗದಿತ ಸಮಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಒಂದೆರೆಡು ಗಂಟೆ ತಡವಾಗಿ ವಿಚಾರಣೆಗೆ ಹಾಜರಾಗುವುದಾಗಿ ಡಿಕೆಶಿ ಇಡಿಗೆ ಮನವಿ ಮಾಡಿದ್ದರು.
ಸಂಜೆ 4.30 ರ ಸುಮಾರಿಗೆ ದೆಹಲಿ ತಲುಪಲಿರುವ ಅವರು ಸಂಜೆ 5 ಕ್ಕೆ ಇಡಿ ಮುಂದೆ ಹಾಜರಾಗುವ ಸಾಧ್ಯತೆಯಿದೆ. ದೆಹಲಿಯ ವಿಮಾನನಿಲ್ದಾಣದಲ್ಲಿ ವಕೀಲರ ಜೊತೆ ಚರ್ಚಿಸಿ ಬಳಿಕ ಡಿಕೆಶಿ ಇಡಿ ಕಚೇರಿಗೆ ತೆರಳಲಿದ್ದಾರೆ. ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಶಿವಕುಮಾರ್ ಉತ್ತರಿಸಬೇಕಿದೆ. ಉತ್ತರ ಪಡೆದು ವಾಪಸ್ ಕಳುಹಿಸಬಹುದು ಅಥವಾ ಸಮರ್ಪಕ ಉತ್ತರ ನೀಡದಿದ್ದರೆ ಬಂಧಿಸುವ ಸಾಧ್ಯತೆಯೂ ಇದೆ.