ಬೆಂಗಳೂರು,ಜ 28 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೊನೆಗೂ ಬಿಜೆಪಿ ಪಕ್ಷದ ಹೈಕಮಾಂಡ್ ವರಿಷ್ಠರು ಹಸಿರು ನಿಶಾನೆ ತೋರಿದ್ದು, ಏಳು ಮಂದಿಯನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಷರತ್ತು ಹಾಕಿದ್ದಾರೆ.
7 ಮಂದಿ ನೂತನ ಶಾಸಕರನ್ನು ಸಂಪುಟಕ್ಕೆ ಸೇರ್ಪಡಿಸಿಕೊಂಡು, ನಿಮಗೆ ಅನುಕೂಲವಾಗುವ ದಿನಾಂಕದಂದು ವಿಸ್ತರಣೆ ಮಾಡಿಕೊಳ್ಳಿ ಎಂದು ಹೈಕಮಾಂಡ್‌ನಿಂದ ಸೂಚನೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದ ಹದಿನೇಳು ಮಂದಿಯಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಂತಾಯಿತು. ಈ ಪೈಕಿ ಕೇವಲ ಹನ್ನೊಂದು ಮಂದಿಗೆ ಮಾತ್ರ ಅವಕಾಶ ನೀಡಿದರೆ ಉಳಿದವರ ವಿಷಯದಲ್ಲಿ ನ್ಯಾಯ ನೀಡಿದಂತಾಗುವುದಿಲ್ಲ ಎಂದು ಯಡಿಯೂರಪ್ಪ ಹಿಂದಿನಿಂದ ವಾದಿಸುತ್ತಾ ಬಂದಿದ್ದರು. ಆದರೆ ಇದಕ್ಕೆ ಹೈಕಮಾಂಡ್ ಸೊಪ್ಪು ಹಾಕಲಿಲ್ಲ.
ಹದಿನೇಳು ಮಂದಿಯ ಪೈಕಿ ಕನಿಷ್ಠ ಹದಿಮೂರು ಮಂದಿಗಾದರೂ ಮಂತ್ರಿಗಿರಿ ನೀಡಬೇಕು. ಇಲ್ಲವೇ ವಚನ ದ್ರೋಹಿ ಎಂಬ ಹಣೆಪಟ್ಟಿಯನ್ನು ನಾನು ಹೊರಬೇಕಾಗುತ್ತದೆ. ಹದಿಮೂರು ಪ್ಲಸ್ ಐದು ಸೂತ್ರದಡಿ ಸಂಪುಟ ವಿಸ್ತರಿಸಲು ಅವಕಾಶ ಕೊಡಿ ಎಂದು ಯಡಿಯೂರಪ್ಪ ಅವರು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದರು. ಆದರೆ ಸ್ವಪಕ್ಷದವರನ್ನು ಕೈಬಿಟ್ಟು ಹೊರಗಿನವರಿಗೆ ಆದ್ಯತೆ ನೀಡುವುದಕ್ಕೆ ಹೈಕಮಾಂಡ್ ಸಮ್ಮತಿಸಲಿಲ್ಲ.
ಹನ್ನೊಂದು ಪ್ಲಸ್ ಏಳು ಸೂತ್ರದ ಆಧಾರದ ಮೇಲೆ ಸಂಪುಟ ವಿಸ್ತರಿಸಿ ಎಂದು ಹೈಕಮಾಂಡ್ ಖಡಕ್ ಆಗಿ ಸೂಚನೆ ನೀಡಿದೆ.
ಮಂತ್ರಿಗಿರಿಗೆ ಅರ್ಹರಾದವರ ದಂಡೇ ಪಕ್ಷದಲ್ಲಿದೆ. ಆದರೂ ಬಹುತೇಕರು ಪಕ್ಷದ ನಡೆಗೆ ಅಡ್ಡವಾಗಬಾರದು ಎಂಬ ಕಾರಣಕ್ಕಾಗಿ ಬಂಡಾಯದಂತಹ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಹಾಗಂತ ನಾವು ಸುಮ್ಮನಿರಲೂ ಸಾಧ್ಯವಾಗದು ಎಂಬುದು ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ.
ಬೇರೆ ಪಕ್ಷಗಳಿಂದ ಬಂದ ಎಲ್ಲರಿಗೂ ಮಂತ್ರಿಗಿರಿ ಕೊಡುವ ಅಗತ್ಯವೇನಿಲ್ಲ. ನೀವೇ ಅವರ ಮನವೊಲಿಸಿ. ಯಾವುದಾದರೂ ನಿಗಮ ಮಂಡಳಿಗಳ ಅಧ್ಯಕ್ಷರಾಗುವಂತೆ ಹೇಳಿ. ಹಾಗೆ ಮಾಡದಿದ್ದರೆ ಸರ್ಕಾರದಲ್ಲಿ ಬಿಜೆಪಿಯವರಿಗಿಂತ ಹೊರಗಿನಿಂದ ಬಂದವರಿಗೇ ಹೆಚ್ಚು ಆದ್ಯತೆ ಎಂಬ ಅಸಮಾಧಾನ ಶುರುವಾಗುತ್ತದೆ. ಈ ಅಸಮಾಧಾನ ಬಹುಕಾಲ ಮುಂದುವರಿದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬೇಡಿ. ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದರೆ ಹೊರಗಿನಿಂದ ಎಷ್ಟು ಜನರನ್ನು ಕರೆದುಕೊಂಡು ಬಂದರೂ ಪ್ರಯೋಜನವೇನೂ ಇಲ್ಲ. ಹೀಗಾಗಿ ಹನ್ನೊಂದು ಪ್ಲಸ್ ಏಳು ಸೂತ್ರದ ಆಧಾರದ ಮೇಲೆ ಸಚಿವ ಸಂಪುಟ ರಚಿಸಿ ಎಂದು ಬಿಜೆಪಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಯಡಿಯೂರಪ್ಪ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಈ ಮೂಲಕ ಸಂಪುಟ ವಿಸ್ತರಣೆಯ ಚೆಂಡನ್ನು ಯಡಿಯೂರಪ್ಪ ಅವರ ಅಂಗಳಕ್ಕೇ ಹಾಕಿ ಬಿಟ್ಟಿದ್ದಾರೆ. ಆದ್ದರಿಂದ ಸಂಪುಟ ವಿಸ್ತರಣೆ ಬಿಕ್ಕಟ್ಟನ್ನು ಯಾವ ರೀತಿ ಯಡಿಯೂರಪ್ಪ ಅವರು ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.