ಬಡವರಿಗೆ ನೆರವಾಗಿ: ಮುಖ್ಯಮಂತ್ರಿ ಮನವಿ

ಬೆಂಗಳೂರು, ಏ.9, ಕೋವಿಡ್‌ 19 ಸೋಂಕಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ವಿಶ್ವಾದ್ಯಂತ ಕೋವಿಡ್ 19 ಕರಿಛಾಯೆ ಮುಂದುವರಿದಿದೆ. ಆರ್ಥಿಕತೆಯ ಮೇಲೂ ಇದರ ದುಷ್ಪರಿಣಾಮ ಉಂಟಾಗಿದೆ. ಕರ್ನಾಟಕವನ್ನು ಕೊರೋನಾ ವೈರಸ್ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಕಟಿಬದ್ಧವಾಗಿದೆ. ಈ ಸಂದರ್ಭದಲ್ಲಿ ಲಾಕ್‌ಡೌನ್‌ನ ಪರಿಣಾಮವಾಗಿ ಅನೇಕ ಕುಟುಂಬಗಳು ಆಹಾರದ ತೊಂದರೆಯಿಂದ ಸಂಕಷ್ಟ ಅನುಭವಿಸುತ್ತಿವೆ. ರಾಜ್ಯದಲ್ಲಿ ಎಲ್ಲಾ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಬಡವರಿದ್ದಾರೆ. ಆದ್ದರಿಂದ ಸಹೃದಯಿಗಳು, ಮಧ್ಯಮ ವರ್ಗದವರು ತಮ್ಮ ತಮ್ಮ ಹಳ್ಳಿ ಮತ್ತು ಪಟ್ಟಣಗಳಲ್ಲಿ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರ, ದಿನಬಳಕೆಯ ವಸ್ತುಗಳನ್ನು ನೀಡಿ ಸರ್ಕಾರದ ಜೊತೆಗೆ ಕೈಜೋಡಿಸಲು ಮುಂದೆ ಬರಬೇಕು ಎಂದು ವಿನಮ್ರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.