ಧಾರವಾಡ 21: ನ್ಯಾಯಾಂಗ, ಸರ್ಕಾರಗಳು ತಮ್ಮದೆ ಆದ ಕರ್ತವ್ಯಗಳನ್ನು ನಿರ್ವಹಿಸಿ, ಸಾಮಾಜಿಕ ನ್ಯಾಯ ನೀಡಲು ಶ್ರಮಿಸುತ್ತಿವೆ. ಸಮಾಜದಲ್ಲಿರುವ ಅಸಹಾಯಕ, ಹಿಂದುಳಿದ ಮಕ್ಕಳಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ನೆರವಾಗಿ ತಮ್ಮ ವೃತ್ತಿಪರತೆಯನ್ನು ಎತ್ತಿ ಹಿಡಿಯಬೇಕೆಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ದಿವಾಣಿ ನ್ಯಾಯಾಲಯಗಳ ಆವರಣದಲ್ಲಿರುವ ಎಡಿಆರ್ ಕಟ್ಟಡದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ನವದೆಹಲಿಯ ಬಚಪನ ಬಚಾವೊ ಆಂದೋಲನದ ಸಹಯೋಗದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಮಕ್ಕಳ ರಕ್ಷಣೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದರು.
ಇಂದಿನ ಮಕ್ಕಳೆ ನಾಳಿನ ನಾಯಕರು. ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳಿರುವ ಗ್ರಾಮಗಳೇ ನಮ್ಮ ಸಂಸ್ಕೃತಿಯ ಮೂಲ. ಸಂಸ್ಕಾರ ಬಾಲ್ಯದಿಂದಲೇ ಬೆಳೆದು ಬರಬೇಕು. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆದು ಬರಲು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಲ್ಲಿ ವೃತ್ತಿ ಸಂತೃಪ್ತಿ, ಸಂಕಲ್ಪ ಇರಲಿ, ದುಡಿಮೆಯಿಂದ ಸಾರ್ಥಕತೆ ಬರಬೇಕು. ಯೋಗ ಸಹ ಉತ್ತಮ ಆರೋಗ್ಯ, ಉತ್ತಮ ಮನಸ್ಥಿತಿ, ಸೇವಾ ಮನೋಭಾವ, ನಿಸ್ವಾರ್ಥತೆಯನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಚಿಕ್ಕವರಿದಾಗಿಂದಲೆ ಯೋಗದ ಬಗ್ಗೆ ಆಸಕ್ತಿ ಮೂಡಿಸಬೇಕೆಂದು ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಮಕ್ಕಳ ರಕ್ಷಣೆ ಕುರಿತು ಹೆಚ್ಚಿನ ಕಾನೂನು ತಿಳುವಳಿಕೆ ಪಡೆದು ನಿಸ್ವಾರ್ಥದಿಂದ ಯಾವುದೇ ಭಯವಿಲ್ಲದೆ ಕೆಲಸ ಮಾಡಿರಿ. ನಿಮ್ಮ ಸಹಾಯಕ್ಕೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳಿವೆ ಎಂದು ಈಶಪ್ಪ ಭೂತೆ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ ಆರ್.ಎಸ್. ಮಾತನಾಡಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು. ಶಾಲೆ ಬಿಟ್ಟ, ಕೂಲಿ ಕೆಲಸ ಮಾಡುವ ಹಾಗೂ ಅಸಹಾಯಕ ಮಕ್ಕಳನ್ನು ಗುರುತಿಸಿ ನೆರವು ನೀಡಬೇಕು. ಸೇವಾ ಪ್ರಾಧಿಕಾರ ಉಚಿತವಾಗಿ ಕಾನೂನು ಅರಿವು ನೆರವು ಎರಡನ್ನು ನೀಡುತ್ತದೆ.
ಗ್ರಾಮ ಮಟ್ಟದಲ್ಲಿ ಜನರಿಗೆ ಸಾಮಾನ್ಯ ಕಾನೂನುಗಳ ಬಗ್ಗೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ಅವರಿಗೆ ತಮ್ಮಿಂದ ಆಗುವ ಸಹಾಯ ಮಾಡಬೇಕೆಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಅಧಿಕಾರಿ ಡಾ.ಸುರೇಶ ಹಿರೇಮಠ ಉಪಸ್ಥಿತರಿದ್ದರು.
ಬಚಪನ ಬಚಾವೋ ಆಂದೋಲನದ ಕುರಿತು ರಾಜ್ಯ ಸಂಚಾಲಕಿ ಮಂಜುಶ್ರೀ ಅವರು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕುರಿತು ಕಾಣೆಯಾದ ಮಕ್ಕಳ ಬ್ಯೂರೋದ ಹಾವೇರಿ ಜಿಲ್ಲಾ ಘಟಕದ ಮುಖ್ಯಸ್ಥ ಮುತ್ತು ಮಾದರ ವಿಶೇಷ ಉಪನ್ಯಾಸ ನೀಡಿದರು.
ಭುವನೇಶ್ವರಿ ಸೇವಾ ಸಂಸ್ಥೆಯ ಅಧ್ಯಕ್ಷತೆ ವಿದ್ಯಾವತಿ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ಜೆ.ಎಲ್.ಗ್ರಾಮಪುರೋಹಿತ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ಶಿಂಧೆ ವಂದಿಸಿದರು.
ಕಾರ್ಯಗಾರದಲ್ಲಿ ಧಾರವಾಡ ತಾಲೂಕಿನ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.