ಗುಡುಗು, ಸಿಡಿಲು ಸಹಿತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಗುಡುಗು, ಸಿಡಿಲು ಸಹಿತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ Heavy rain with thunder and lightning: Normal life disrupted

ಲೋಕದರ್ಶನ ವರದಿ 

ದಾಂಡೇಲಿ 18: ದಾಂಡೇಲಿ ಕಳೆದ ಹಲವು ದಿನಗಳಿಂದ ಉರಿ ಬಿಸಿಲು ಮತ್ತು ಬಿಸಿ ಗಾಳಿಯಿಂದ ತತ್ತರಿಸಿದ್ದ ದಾಂಡೇಲಿ ತಾಲೂಕಿಗೆ ರವಿವಾರ ಸಂಜೆ ಸುರಿದ ಮುಂಗಾರು ಪೂರ್ವ ಕುಂಭದ್ರೋಣ ಮಳೆ ತಾತ್ಕಾಲಿಕ ನಿರಾಳತೆಯನ್ನು ನೀಡಿದರೂ ಬಾರೀ ಮಳೆ, ಗುಡುಗು ಮತ್ತು ಸಿಡಿಲಿನ ಅಬ್ಬರ ಜನಜೀವನ ಅಸ್ತವ್ಯಸ್ತಗೊಳಿಸಿತು.  

ಸಂಜೆ ವೇಳೆಗೆ ಎಕಾಎಕಿ ಕತ್ತಲೆ ಆವರಿಸಿದಂತೆ ವಾತಾವರಣ ಬದಲಾಗಿದ್ದು, ಬಿರುಸಿನ ಗಾಳಿಯೊಂದಿಗೆ ಸುರಿದ ಮಳೆಯು ಹಲವು ಪ್ರದೇಶಗಳಲ್ಲಿ ಅನಾಹುತಗಳನ್ನು ಉಂಟು ಮಾಡಿದೆ.  

ತಾಲೂಕಿನ ವಿವಿಧ ಭಾಗಗಳಲ್ಲಿ ದೊಡ್ಡ ಗಿಡಮರಗಳು ರಸ್ತೆಗಳ ಮೇಲೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಉರುಳಿಬಿದ್ದ ಪರಿಣಾಮ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಹೊತ್ತಿಗೂ ವಿದ್ಯುತ್ ಪುನ: ಸ್ಥಾಪನೆ ಆಗದ ಕಾರಣ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಯಿತು. ವಿದ್ಯುತ್ ಇಲಾಖೆಯ ಸಿಬ್ಬಂದಿ ಮಳೆ ನಡುವೇಯೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.