ಉತ್ತರ ಕನ್ನಡದಲ್ಲಿ ಭಾರೀ ಮಳೆ: ಕುಮಟಾ, ತಡಡಿಯಲ್ಲಿ ಗುಡ್ಡ ಕುಸಿತ; ಶಾಲಾ ಮಕ್ಕಳು ಅಪಾಯದಿಂದ ಪಾರು

ಉತ್ತರ ಕನ್ನಡದಲ್ಲಿ ಭಾರೀ ಮಳೆ: ಕುಮಟಾ, ತಡಡಿಯಲ್ಲಿ ಗುಡ್ಡ ಕುಸಿತ; ಶಾಲಾ ಮಕ್ಕಳು ಅಪಾಯದಿಂದ ಪಾರು Heavy rain in Uttara Kannada: Landslides in Kumta and Tadadi; school children escape danger

 ಕಾರವಾರ 17: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಶುಕ್ರವಾರ ಬೆಳಗ್ಗಿನಿಂದ ಭಾರೀ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಕುಮಟಾ ಹಾಗೂ ತಡಡಿ ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  

ಜಿಲ್ಲೆಯಲ್ಲಿ ದಾಖಲಾಗಿರುವ ಮಳೆ ಪ್ರಮಾಣದಂತೆ ಕಾರವಾರದಲ್ಲಿ 170 ಮಿ.ಮೀ., ಅಂಕೋಲಾದಲ್ಲಿ 160 ಮಿ.ಮೀ., ಭಟ್ಕಳದಲ್ಲಿ 143 ಮಿ.ಮೀ., ಹೊನ್ನಾವರದಲ್ಲಿ 141 ಮಿ.ಮೀ., ಕುಮಟಾದಲ್ಲಿ 133 ಮಿ.ಮೀ., ಸೂಪಾದಲ್ಲಿ 60 ಮಿ.ಮೀ. ಹಾಗೂ ದಾಂಡೇಲಿಯಲ್ಲಿ 20 ಮಿ.ಮೀ. ಮಳೆಯಾಗಿದೆ. ಸಂಜೆ ವೇಳೆಗೆ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.  

ಶಾಲೆ ಪಕ್ಕ ಗುಡ್ಡ ಕುಸಿತ  

ಕುಮಟಾ ಪಟ್ಟಣದ ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯ ಹಿಂಭಾಗದಲ್ಲಿ ಗುಡ್ಡ ಕುಸಿದು, ಬಂಡೆ ಮತ್ತು ಮಣ್ಣು ಶಾಲೆಯ ಕೊಠಡಿಯ ಮೇಲ್ಭಾಗಕ್ಕೆ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆ ಸಂಭವಿಸುವ ವೇಳೆಗೆ ಮಕ್ಕಳು ತರಗತಿಯಲ್ಲಿ ಇರಲಿಲ್ಲ. ಶಿಕ್ಷಕರು ಮುನ್ನೆಚ್ಚರಿಕೆ ವಹಿಸಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಇದೇ ಪ್ರದೇಶದಲ್ಲಿ ಕಳೆದ ವರ್ಷವೂ ಗುಡ್ಡ ಕುಸಿತ ಸಂಭವಿಸಿತ್ತು.  

ತಡಡಿ ಬಳಿ ರಸ್ತೆ ಸಂಚಾರ ಸ್ಥಗಿತ  

ನಿರಂತರ ಮಳೆಯಿಂದ ಗೋಕಾಕ್ ಹಿ ತಡಡಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಹಾಗೂ ಬಂಡೆಗಳು ಬಿದ್ದ ಪರಿಣಾಮ ವಾಹನ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತು. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.  

ಮಾಹಿತಿ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರೀಶೀಲಿಸಿದರು. ರಸ್ತೆಗೆ ಬಿದ್ದಿರುವ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಶೀಘ್ರದಲ್ಲೇ ಸಂಚಾರ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  

ಮುನ್ನೆಚ್ಚರಿಕೆ ಕ್ರಮ  

ಭಾರೀ ಮಳೆಯ ಹಿನ್ನೆಲೆಯಲ್ಲಿ ಅಂಕೋಲಾ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಅಂಗನವಾಡಿಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮಗಳಿಂದ ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ಅನಾಹುತ ತಪ್ಪಿದೆ.