ಭಾರಿ ಮಳೆ ಮುನ್ಸೂಚನೆ-ಕೊಡಗಿನಲ್ಲಿ ಆರೆಂಜ್ ಅಲರ್ಟ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

ಮಡಿಕೇರಿ, ಕರ್ನಾಟಕ, ಸೆ 06  ಕಾಫಿನಾಡು ಕೊಡಗಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ವರ್ಷಧಾರೆಯಾಗುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ   ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಕೊಯ್ನಾ ಜಲಾಶಯದಿಂದ ಅಧಿಕ ನೀರು ಹೊರಬಿಡುತ್ತಿರುವ ಕಾರಣ ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.  ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನೃಋತ್ಯ ಮುಂಗಾರು ಚುರುಕಾಗಿರುವುದಾಗಿ ಹವಾಮಾನ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.  ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ   ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಳೆದ 24 ಗಂಟೆಗಳ್ಲಲಿ 260 ಮಿಮೀ ಮಳೆ ದಾಖಲಾಗಿದೆ.  ಮಡಿಕೇರಿಯಲ್ಲಿ 115.60 ಮಿಮೀ, ಸಂಪಾಜೆ 135.40, ನಾಪೋಕ್ಲು 127.20 ಮಿಮೀ ಪೊನ್ನಂಪೇಟೆ 143.40, ಶಾಂತಳ್ಳಿಯಲ್ಲಿ 153 ಮಿಮೀ ಮಳೆಯಾಗಿದ್ದು, ಜಾಗ್ರತೆ ವಹಿಸುತವಂತೆ ಜಿಲ್ಲಾಡಳಿತ ಸೂಚಿಸಿದ್ದು, ತುರ್ತು ಪರಿಸ್ಥಿತಿ ತಲೆದೋರಿದಲ್ಲಿ ದೂರವಾಣಿ ಮುಖೇನ ಸಂಪರ್ಕಿಸುವಂತೆ ತಿಳಿಸಿದೆ.  ಗಾಳಿಬೀಡು-ಪಾತಿ-ಕಾಲೂರು ರಸ್ತೆಯಲ್ಲಿ ಭೂಕುಸಿತದ ವರದಿಯಾಗಿದ್ದು, ಮುಂದಿನ ಆದೇಶದವರೆಗೂ ವಾಹನ ಸಂಚಾರಕ್ಕೆ ತಡೆ ನೀಡಲಾಗಿದೆ   ಭಾಗಮಂಡಲ ಹಾಗೂ ನಾಪೋಕ್ಲು ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.  ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರಪೇಟೆಯ ಮೂವತ್ತೊಕ್ಲು, ಮಡಿಕೇರಿ ತಾಲ್ಲೂಕಿನ ಜೋಡುಪಲ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿವೆ ಎಂದು ಅನಧಿಕೃತ ಮೂಲಗಳಿಂದ ತಿಳಿದುಬಂದಿದೆ  -:ಹಾಸನ, ಚಿಕ್ಕಮಗಳೂರಿನಲ್ಲೂ ವರುಣನ ಅಬ್ಬರ-:  ರಾಜ್ಯದ ಹಾಸನ, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿಯೂ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ.  ಇತ್ತೀಚೆಗಷ್ಟೆ ಭೂಕುಸಿತದ ಪರಿಣಾಮ ಎದುರಿಸಿದ್ದ ಜನತೆ, ಇದೀಗ ವರುಣನ ಅಬ್ಬರದಿಂದಾಗಿ ಸುರಕ್ಷತೆಯ ಕುರಿತು ಆತಂಕ ಪಡುವಂತಾಗಿದೆ.  ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಅಲೆಖಾನ್ ಹೊರಟ್ಟಿ, ಮಲೆಮನೆ, ಮಧುಗುಂಡಿ, ಬಾಳೂರು ಗ್ರಾಮಗಳು ಭಾರಿ ಮಳೆಯಿಂದ ತತ್ತರಿಸಿವೆ   ಅಂತೆಯೇ ಹಾಸನದ ಸಕಲೇಶಪುರ, ಆಲೂರು ಮತ್ತು ಹಾಸನದಲ್ಲಿ ಹೆಚ್ಚು ಮಳೆಯಾಗಿದೆ ಸಕಲೇಶಪುರದಲ್ಲಿ ಬುಧವಾರ 65.6 ಮಿಮೀ ಮಳೆ ದಾಖಲಾಗಿದೆ.  ಗೊರೂರಿನ ಹೇಮಾವತಿ ಜಲಾಶಯದ ನೀರಿನ ಮಟ್ಟ 2,922 ಅಡಿಗಳಷ್ಟು ಏರಿಕೆಯಾಗಿದ್ದು, ಹೊರ ಹರಿವು ಹೆಚ್ಚಿಸಲಾಗಿದೆ  ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಿಂದ ಗುರುವಾರ ಸಂಜೆ 43,597ಕ್ಯೂಸೆಕ್ ನೀರು ಹೊರಬಿಡಲಾಗಿದೆ    -:ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆ:-  ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಅಧಿಕ ನೀರು ಹೊರಬರುತ್ತಿರುವ ಪರಿಣಾಮ ನಾರಾಯಣಪುರ ಬಸವಸಾಗರ ಜಲಾಶಯದ ಹೊರ ಹರಿವು ಹೆಚ್ಚಿದ್ದು, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.  ಕೃಷ್ಣಾ ನದಿಗೆ 1.85 ಲಕ್ಷ ಕ್ಯೂಸೆಕ್   ನೀರು ಹರಿಬಿಡಲಾಗಿದ್ದು, ದೇವದುರ್ಗ ಮತ್ತು ರಾಯಚೂರಿಗೆ ಸಂಪರ್ಕ ಕಲ್ಪಿಸುವ, ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್ಎಲ್) ಮಾಹಿತಿ ನೀಡಿದೆ.  ಯಾದಗಿರಿ ಜಿಲ್ಲೆಯ 23ಕ್ಕೂ ಹೆಚ್ಚು ಹಳ್ಳಿಗಳು, ರಾಯಚೂರು ಜಿಲ್ಲೆ 22 ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ನೀಲಕಂರಾಯನಗಡ್ಡಿ ಜಲಾವೃತವಾಗಿದೆ   ಲಿಂಗಸುಗೂರು ತಾಲ್ಲೂಕು ಆಡಳಿತಾಧಿಕಾರಿಗೂ ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ನದಿ ತಟದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ  ತುರ್ತು ಸೇವಾ ಪಡೆ, ದೋಣಿ ಮತ್ತು ಅಗ್ನಿಶಾಮಕ ತಂಡಗಳು ಸಜ್ಜಾಗಿವೆ.  ಅಲಮಟ್ಟಿ ಜಲಾಶಯದಿಂದ ಶುಕ್ರವಾರ ಬೆಳಗ್ಗೆ 10.30ರ ವೇಳೆಗೆ 1,74,812 ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, 61,920 ಕ್ಯೂಸೆಕ್ ನಷ್ಟು ಒಳ ಹರಿವಿತ್ತು ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.