ನಿವೃತ್ತ ಮುಖ್ಯಶಿಕ್ಷಕಿ ಚನ್ನಬಸಮ್ಮ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ನಿವೃತ್ತ ಮುಖ್ಯಶಿಕ್ಷಕಿ ಚನ್ನಬಸಮ್ಮ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ  Heartfelt farewell to retired Headmistress Channabasamma

ಲೋಕದರ್ಶನ ವರದಿ 

ಕಂಪ್ಲಿ, ಜು.31: ತಾಲೂಕಿನ ದೇವಲಾಪುರ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಿರಿಯ ಮುಖ್ಯಶಿಕ್ಷಕಿ ಚನ್ನಬಸಮ್ಮ ಅವರ ನಿವೃತ್ತಿ ಅಂಗವಾಗಿ ಶುಕ್ರವಾರ ಆತ್ಮೀಯ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಗುರು ಎಚ್‌.ಪಿ. ಸೋಮಶೇಖರ್, ಸರ್ಕಾರಿ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಚನ್ನಬಸಮ್ಮ ಅವರು ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಚನ್ನಬಸಮ್ಮ ಅವರು, ಸೇವಾ ಅವಧಿಯಲ್ಲಿ ಸಹಕರಿಸಿದ ಸಹೋದ್ಯೋಗಿಗಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ನಿವೃತ್ತಿಯ ಬಳಿಕವೂ ಶಿಕ್ಷಣ ಕ್ಷೇತ್ರದೊಂದಿಗೆ ತಮ್ಮ ಬಾಂಧವ್ಯ ಮುಂದುವರಿಯಲಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರು ಹಾಗೂ ಗ್ರಾಮಸ್ಥರು ಚನ್ನಬಸಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದರು.  

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಕೆ. ಶಿವಕುಮಾರ, ಎಸ್ಡಿಎಂಸಿ ಅಧ್ಯಕ್ಷ ಗೋರವರ ಹನುಮಂತಪ್ಪ, ಪ್ರೌಢಶಾಲೆಯ ಮುಖ್ಯಗುರು ನಂದಕಿಶೋರ್, ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.