ಬೆಂಗಳೂರು, ಅ 24: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಜೋರು ಮಳೆಯಿಂದ ತೀವ್ರ ನೆರೆ ಹಾವಳಿ ಉಂಟಾಗಿರುವ ಜಿಲ್ಲೆಗಳ ಪ್ರವಾಹ ಪೀಡಿತರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತುರ್ತು ಆದೇಶ ಹೊರಡಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಗದಗ, ಧಾರವಾಡ ಮತ್ತು ಚಿತ್ರದುರ್ಗ, ಉತ್ತರ ಕನ್ನಡ, ವಿಜಯಪುರ, ಚಿಕ್ಕಮಗಳೂರು, ಕೊಡಗು,ರಾಯಚೂರು,ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತುರ್ತು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರತಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯದ ಮೇಲ್ವಿಚಾರಣೆಗಾಗಿ ಇಲಾಖೆಯ ಉತ್ತರ ಕರ್ನಾಟಕದ ಅಪರ ನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಜಿಲ್ಲೆಗಳ ಪರಿಸ್ಥಿತಿಯ ಕುರಿತು 24/7 ಗಂಟೆಗಳ ಮಾಹಿತಿ ಸಂಗ್ರಹಿಸಿ ದೈನಂದಿನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಅಧಿಕಾರಿಗಳಿಗೆ ತಕ್ಷಣವೇ ಸಂಬಂಧಪಟ್ಟ ಜಿಲ್ಲೆಗಳಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲು ಸೂಚಿಸಿದ್ದು, ಪ್ರವಾಹ ಪೀಡಿತರಿಗೆ ಸೂಕ್ತ ಆರೋಗ್ಯ ಸೇವೆಯನ್ನು ಒದಗಿಸಲು ತಿಳಿಸಲಾಗಿದೆ. ಜೊತೆಗೆ ಮಳೆಯಿಂದಾಗಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಕಷ್ಟು ಔಷಧ ಮತ್ತು ಸಲಕರಣೆಗಳ ದಾಸ್ತಾನು ಸಿದ್ಧಗೊಳಿಸಲು ಡ್ರೆಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸ್ ಸೊಸೈಟಿಗೆ ಆದೇಶಿಸಲಾಗಿದೆ. ಸಾಂತ್ವನ ಕೇಂದ್ರಗಳಿಗೆ ಅವಶ್ಯವಿರುವ ಎಲ್ಲಾ ಔಷಧ ಮತ್ತು ಸಲಕರಣೆಗಳನ್ನು ತ್ವರಿತವಾಗಿ ಸಾಗಿಸಲು ವ್ಯವಸ್ಥೆ ಮಾಡಲಾಗಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿರ್ಣಯಗಳಿಗೆ ಸಂಪೂರ್ಣ ಸಹಕಾರ ನೀಡಿ, ಪ್ರವಾಹದಿಂದ ನೊಂದಿರುವ ಸಂತ್ರಸ್ತರ ಸಮಸ್ಯೆಗಳಿಗೆ ವಿಳಂಬ ತೋರದೆ ಸ್ಪಂದಿಸುವಂತೆ ಆಯುಕ್ತರು ಆದೇಶ ನೀಡಿದ್ದಾರೆ.