ಮಿಶ್ರ ಬೆಳೆಯ ಸಾವಯವ ಕೃಷಿಯಲ್ಲಿ ಖುಷಿ ಕಂಡ ನಿ. ಬ್ಯಾಂಕ ಅಧಿಕಾರಿ ಸುಹಾಸ್ ದೇಶಪಾಂಡೆ
ಚಿಕ್ಕೋಡಿ 09: ಬರಡು ಭೂಮಿಯಲ್ಲಿ ಕಬ್ಬು, ಮಾವು, ಚಿಕ್ಕು, ಸೋಯಾ, ಶೇಂಗಾ, ಗೋವಿನಜೋಳ, ಬತ್ತ ಸೇರಿ ವಿವಿಧ ಮಿಶ್ರ ಬೆಳೆ ಪದ್ಧತಿಯಲ್ಲಿ ಸಮೃದ್ಧ ಸಾವಯವ ಕೃಷಿಯಲ್ಲಿ ನಿವೃತ್ತ ಬ್ಯಾಂಕ ಅಧಿಕಾರಿ ಯಶಸ್ಸು ಕಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಸುಹಾಸ ಅನಂತರಾವ ದೇಶಪಾಂಡೆ ತಮ್ಮ ಜಮೀನಿನಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡು ಯುವ ಕೃಷಿಕರಿಗೆ ಮಾದರಿಯಾಗಿ ಉತ್ತಮ ಆದಾಯ ಸಂಪಾದಿಸುತ್ತಿದ್ದಾರೆ. ತಮ್ಮ ಪೂರ್ವಾಜಿತ 15 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಚಿಕ್ಕು, ಪೇರು, ಬೆಳೆಯುತ್ತಾರೆ. ಇವುಗಳ ಜೊತೆಗೆ ಭತ್ತ, ಗೋವಿನಜೋಳ, ಕಬ್ಬು ಬೆಳೆಗಳನ್ನೂ ಬೆಳೆಯುತ್ತಾರೆ. ಮನೆಯ ಉಪಯೋಗಕ್ಕಾಗಿ ಜವಾರಿ ಬಾಳೆ, ತೆಂಗು, ಸೀತಾಫಲ, ಲಿಂಬು ಬೆಳೆಯುತ್ತಿದ್ದಾರೆ.
ಉತ್ತಮ ನೀರಿನ ಸಂಗ್ರಹ: ಚಿಕ್ಕೋಡಿ ತಾಲೂಕು ಮತ್ತು ಹುಕ್ಕೇರಿ ತಾಲೂಕು ಗಡಿಗೆ ಹೊಂದಿಕೊಂಡಿರುವ ಮುಗಳಿ ಗ್ರಾಮದ ಗುಡ್ಡದ ಕೆಳಕೆ ಇರುವ ದೇಶಪಾಂಡೆ ಅವರ ಜಮೀನು ಪಕ್ಕಾ ಬರಡು ಭೂಮಿ, ಇರುವ ಎರಡು ಕೊಳವೆಯಿಂದ ಬರುವ ಅಲ್ಪಸ್ವಲ್ಪ ನೀರು ಹಿಡಿದಿಟ್ಟುಕೊಳ್ಳುವ ಮತ್ತು ಮಳೆ ನೀರು ಸಂಗ್ರಹವಾಗಲುೆರಡು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದು 40 ಲಕ್ಷ ಲೀಟರ ಮತ್ತೊಂದು 12 ಲಕ್ಷದ ನೀರಿನ ಸಂಗ್ರಹ ಹೊಂದಿವೆ. ವರ್ಷದ ಎರಡು ಅಥವಾ ಮೂರು ಮಳೆಯ ನೀರು ಕೂಡಾ ಆಸರೆಯಾಗಿದೆ.
ಸಾವಯವ ಬೆಲ್ಲ ತಯಾರಿಕೆ ಕೇಂದ್ರಕ್ಕೆ ಕಬ್ಬು ಪೂರೈಕೆ: ಒಂದೂವರೆ ಎಕರೆಯಲ್ಲಿ ಅಪ್ಪಟ್ಟ ಸಾವಯವ ಪದ್ಧತಿಯಲ್ಲಿ ಬೆಳೆದ ಕಬ್ಬು ಕಾರ್ಖಾನೆ ಬದಲಿಗೆ ಸಾವಯವ ಬೆಲ್ಲ ತಯಾರಿಕೆಗೆ ಕಳಿಸಿ ಶಬಾಸ್ಯ ಎಣಿಸಿಕೊಂಡಿದ್ದಾರೆ. ಬೆಣ್ಣಿಹಳ್ಳಿಯ ಶ್ರೀ ಬಸವಣ್ಣ ರೈತರ ಉತ್ಪಾದಕ ಕಂಪನಿಯವರು ಕರೋಶಿ ಗ್ರಾಮದಲ್ಲಿ ನಿರ್ಮಾಣ ಮಾಡಿದ ಸಾವಯವ ಬೆಲ್ಲ ತಯಾರಿಕೆ ಕೇಂದ್ರಕ್ಕೆ ಸುಹಾಸ್ ದೇಶಪಾಂಡೆ ಅವರ ಸಾವಯವ ಕಬ್ಬು ಪೂರೈಕೆ ಮಾಡಿ ಸಾವಯವ ಕೃಷಿಗೆ ಆಧ್ಯತೆ ನೀಡಬೇಕೆಂದು ರೈತರಿಗೆ ಸಂದೇಶ ನೀಡುತ್ತಿದ್ದಾರೆ.
ಬ್ಯಾಂಕ ಆಪ್ ಮಹಾರಾಷ್ಟ್ರ ಬ್ಯಾಂಕಿನಲ್ಲಿ ವಿವಿಧ ಹುದ್ದೆ ನಿಭಾಯಿಸಿ ಕಳೆದ 15 ವರ್ಷದ ಹಿಂದೆ ಸೇವಾ ನಿವೃತ್ತಿ ಹೊಂದಿರುವ ಸುಹಾಸ ದೇಶಪಾಂಡೆ ಅವರು ಬರಡು ಭೂಮಿಯನ್ನು ಹದಗೊಳಿಸಿ ಇಂದು ಸಮೃದ್ಧಗೊಳಿಸಿದ್ದಾರೆ. ಜಮೀನಿನ ಎಲ್ಲಿ ನೋಡಿದರಲ್ಲಿ ಹಚ್ಚ ಹಸುರಿನ ಬೆಳೆಗಳು ಕಣ್ಣಿಗೆ ಇಂಪು ನೀಡುತ್ತಿವೆ. ಸುಮಾರು 600 ಮಾವಿನ ಗಿಡಗಳು ತಲೆ ಎತ್ತಿ ಉತ್ತಮ ಫಸಲು ನೀಡುತ್ತಿವೆ. ಉತೃಷ್ಟ ರುಚಿಯ ಅಲ್ಪಾನ್ಸೋ ಮಾವು ಬೆಳೆಯುತ್ತಾರೆ. 120 ಚಿಕ್ಕು ಗಿಡಗಳನ್ನು ಬೆಳೆಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಾವಯವ ಗೊಬ್ಬರ ನೀಡುತ್ತಾರೆ. ಗ್ರಾಮದಲ್ಲಿ ಸಿಗುವ ಹಸುಗಳ ಸಗಣಿ ಗೊಬ್ಬರವನ್ನು ಖರೀದಿಸಿ ಬೆಳೆಗಳಿಗೆ ನೀಡುತ್ತಾರೆ. ಹೊಲದಲ್ಲಿ ಒಂದು ಮನೆ ಮಾಡಿಕೊಂಡಿದ್ದಾರೆ. ಕೃಷಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಕೊಳ್ಳುತ್ತಾರೆ. ತೋಟದ ಕೆಲಸಗಳಿಗೆ ಮಿನಿ ಟ್ರ್ಯಾಕ್ಟರ್ ಹೊಂದಿದ್ದಾರೆ. ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.