ಹರಿಜಾತ್ರೆ ಶಕ್ತಿ ಆರಾಧನೆಯ ಪ್ರತೀಕ: ಸದಾಶಿವಾನಂದ ಶ್ರೀ

ಹರಿಜಾತ್ರೆ ಶಕ್ತಿ ಆರಾಧನೆಯ ಪ್ರತೀಕ: ಸದಾಶಿವಾನಂದ ಶ್ರೀ  Harijatra is a symbol of Shakti worship: Sadashivananda Shree


ಗದಗ  21: ಹರಿಜಾತ್ರೆ ತಾಯಿಯರ ಜಾತ್ರೆಯಾಗಿದ್ದು, ತಾಯಿ ಎಂದರೆ ಶಕ್ತಿ. ಈ ಜಗತ್ತು ವಿಕಾಸವಾಗಿರುವುದು ಆ ಶಕ್ತಿಯಿಂದ ಎಂದು ಗದುಗಿನ ಶಿವಾನಂದ ಬ್ರಹ್ಮಮಠದ ಪೂಜ್ಯಶ್ರೀ ಜ. ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.  

ನಗರದ ಒಕ್ಕಲಗೇರಿ ಓಣಿಯಲ್ಲಿ 18 ವರ್ಷಗಳ ನಂತರ ನಡೆಯುತ್ತಿರುವ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  

ಪ್ರಕೃತಿ ತಾಯಿಯಂತೆ ಎಲ್ಲರನ್ನೂ ತನ್ನ ಮಡಿಲಲ್ಲಿ ಕಾಯುತ್ತಾಳೆ. ಆ ತಾಯಿಗೆ ಉಡಿ ತುಂಬುವ ಮೂಲಕ ಕೃತಜ್ಞತೆ ಸಲ್ಲಿಸುವುದೇ ಜಾತ್ರೆಯ ಉದ್ದೇಶ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ದೇವಿಯ ರೂಪದಲ್ಲಿ ಕಾಣುವ ಸಂಸ್ಕೃತಿ ಇದೆ. ದೈವಶಕ್ತಿಯ ಆರಾಧನೆಯೇ ಜಾತ್ರೆಯ ಪ್ರಮುಖ ಆಶಯವಾಗಿದೆ ಎಂದರು.  

ಕಪ್ಪತಗುಡ್ಡ ಮಲೀನವಾಗುತ್ತಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ದೊರೆಯುವಂತೆ ದೇವಿಯರಲ್ಲಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಶ್ರೀಗಳು ಹೇಳಿದರು.  

ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯಶ್ರೀ ನೀಲಮ್ಮ ತಾಯಿ ಅಸುಂಡಿ ಅಮ್ಮನವರು, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕೊಟ್ರ​‍್ಪ ಕಮತರ, ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರ​‍್ಪ ಹೆಬಸೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಪಂಚಾಕ್ಷರಿ ಅಂಗಡಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಿತು.