ಕಳವು ಪ್ರಕರಣಗಳಿಗೆ ಸಂಬಧಿಸಿದ ಸ್ವತ್ತುಗಳ ಹಸ್ತಾಂತರ

ಕಳವು ಪ್ರಕರಣಗಳಿಗೆ ಸಂಬಧಿಸಿದ ಸ್ವತ್ತುಗಳ ಹಸ್ತಾಂತರ Handover of assets related to theft cases

ಲೋಕದರ್ಶನ ವರದಿ 

ದಾಂಡೇಲಿ 21: ದಾಂಡೇಲಿ ನಗರ ಠಾಣೆಯಲ್ಲಿ ಶುಕ್ರವಾರ ಸಂಜೆ ಪೋಲಿಸ್ ಉಪವಿಭಾಗದಲ್ಲಿ ಜರುಗಿದ ಕಳವು ಪ್ರಕರಣಗಳಿಗೆ ಸಂಬಧಿಸಿದಂತೆ ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ಉಪ ವಿಭಾಗದ ಡಿ.ವಾಯ್‌.ಎಸ್ಪಿ. ಶಿವಾನಂದ ಮದರಕಂಡಿಯವರು, ಇಂದು ಚಿನ್ನದ ಬೆಲೆ ಒಂದುವರೆ ಲಕ್ಷ ದಾಟಿದೆ. ಆಭರಣಗಳನ್ನು ರಕ್ಷಿಸಲು ಮನೆ ಹಾಗೂ ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವಂತಾಗಬೇಕು. ಇದರಿಂದ ಕಳ್ಳತನ ನಿಯಂತ್ರಣ ಮಾಡಲು ಸಾಧ್ಯ. ಜೊತೆಗೆ ಘಟಿಸಬಹುದಾದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ತನಿಖೆಗೆ ಸಿ.ಸಿ ಕ್ಯಾಮರಾ ಸಹಕಾರಿಯಾಗಲಿದೆ. ಜನರು ಜಾಗ್ರತರಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಸಿಪಿ.ಐ. ಶಿವಾನಂದ ಅಂಬಿಗೇರ ಮಾತನಾಡಿ ಘಟನೆಗಳು ನಡೆಯುವ ಮುಂಚಿತವಾಗಿ ಜಾಗೃತರಾಗಿರಬೇಕು. ಘಟನೆ ನಡೆದ ಮೇಲೆ ಏನೂ ಮಾಡಲು ಸಾಧ್ಯವಾಗುವದಿಲ್ಲ. ನಂತರ ದೂರು ಕಾನೂನು ಕ್ರಮಕ್ಕೆ ಮುಂದಾಗಬೇಕು. ಇದನ್ನು ತಪ್ಪಿಸಲು ಜನ  ಜಾಗೃತರಾಗಿದ್ದರೆ, ಅಪರಾಧಗಳನ್ನು ತಡೆಗಟ್ಟಬಹುದಾಗಿದೆ.  

ಈ ಸಂದರ್ಭದಲ್ಲಿ ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ, ಮೊಬೈಲ್, ಬೈಕ್‌ಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹಳಿಯಾಳ ಸಿ.ಪಿ.ಐ ಜಯಪಾಲ್ ಪಾಟೀಲ್, ಪಿ.ಎಸ್‌.ಐಗಳಾದ ಕಿರಣ್ ಪಾಟೀಲ್, ಅಮೀನ ಅತ್ತಾರ, ಶಿವಾನಂದ ನಾವದಗಿ, ಜಗದೀಶ ನಾಯ್ಕ, ಕೃಷ್ಣಾ ಅರಕೇರಿ ಮತ್ತಿತರರು ಉಪಸ್ಥಿತರಿದ್ದರು