ಲೋಕದರ್ಶನ ವರದಿ
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಭವನೀಯ ಕ್ಷಯರೋಗ ಪತ್ತೆಗಾಗಿ ಹ್ಯಾಂಡ್‌ಹೋಲ್ಡ್ ಎಕ್ಸ್‌ರೆ ಮಿಷನ್ ಬಳಕೆ : ಡಾ. ಇಂದ್ರಾಣಿ
ಬಳ್ಳಾರಿ 05: ಕ್ಷಯರೋಗ ಪತ್ತೆಗಾಗಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕೆಲಸದ ವಾತಾವರಣದ ಸ್ಥಳದಲ್ಲಿಯೇ ಶೀಘ್ರವಾಗಿ ಕ್ಷಯರೋಗ ಪತ್ತೆ ಮಾಡಬಹುದಾದ ಮತ್ತು ಸಂಭವನೀಯ ಲಕ್ಷಣಗಳನ್ನು ಗುರ್ತಿಸಲ್ಪಡುವ ಹ್ಯಾಂಡ್‌ಹೋಲ್ಡ್ ಎಕ್ಸ್‌ರೆ ಮಿಷನ್ ಬಳಸಿ ಅಭಿಯಾನದ ರೂಪದಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಜೊತೆಗೆ ಚಿಕಿತ್ಸೆ ನೀಡಲು ಕ್ರಮವಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ, ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಇವರ ವತಿಯಿಂದ ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ನ ಎನರ್ಜಿ ವಿಭಾಗದಲ್ಲಿ 3 ದಿನಗಳ ಕಾಲ ಕ್ಷಯರೋಗ ಪತ್ತೆ ಶಿಬಿರದಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ 17 ಕಂಪನಿಯ ಆಸ್ಪತ್ರೆಗಳಲ್ಲಿ ಮುಂದಿನ ದಿನಗಳಲ್ಲಿ ತಪಾಸಣಾ ಶಿಬಿರಗಳಲ್ಲಿ ಕಂಪನಿಗಳ ಅಧಿಕಾರಿಗಳು ಮತ್ತು ಕಾರ್ಮಿಕರು ಸದುಪಯೋಗ ಪಡೆದುಕೊಂಡು ಕ್ಷಯಮುಕ್ತ ಬಳ್ಳಾರಿಯನ್ನಾಗಿಸಲು ಕೈ ಜೋಡಿಸಬೇಕು ಎಂದು ವಿನಂತಿಸಿದರು.
ಕ್ಷಯರೋಗ ಪತ್ತೆ ಹಚ್ಚಲು ಸಹಕಾರಿಯಾಗುವ ಹ್ಯಾಂಡ್‌ಹೋಲ್ಡ್ ಎಕ್ಸರೇ ಮಿಷನ್ ಬಳಸಲಾಗುತ್ತಿದ್ದು, ಹೆಚ್ಚಿನ ಪರೀಕ್ಷೆಯನ್ನು ಟ್ರ್ಯೂನಾಟ್, ಸಿಬಿನಾಟ್ ಮಿಷನ್ ಮೂಲಕ ರೋಗ ಪತ್ತೆ ಮಾಡುವ ವ್ಯವಸ್ಥೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಸಕಾಲದಲ್ಲಿ ಪರೀಕ್ಷೆ ಮಾಡಿಸಬೇಕು. ಪ್ರಸ್ತುತ ಷಿಬಿರದಲ್ಲಿ 175 ಜನರ ಪರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಂದಾಲ್ ಎನರ್ಜಿ ಪ್ಲಾಂಟ್‌ನ ಹೆಚ್.ಒ.ಪಿ ಕಾರ್ತಿಕೇಯನ್ ಮಿಶ್ರಾ ಮಾತನಾಡಿ, ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಕೆಲಸದ ಸ್ಥಳಕ್ಕೆ ಬಂದು ಕ್ಷಯರೋಗ ಪತ್ತೆ ಹಚ್ಚುವ ಜೊತೆಗೆ ಕಾರ್ಮಿಕರ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೆಚ್.ಐ.ವಿ, ಮುಂತಾದ ಪರೀಕ್ಷೆಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಜಿಂದಾಲ್‌ನ ಆಡಳಿತ ಮಂಡಳಿಯು ಎನರ್ಜಿ, ಸ್ಟೀಲ್, ಪೇಂಟ್, ಸಿಮೇಂಟ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಕಾರ್ಮಿಕರ ತಪಾಸಣೆಯನ್ನು ಹಂತ ಹಂತವಾಗಿ ಕೈಗೊಳ್ಳಲು ಸಹಕರಿಸುವುದಾಗಿ ತಿಳಿಸಿದರು.
*ಕ್ಷಯರೋಗದ ಲಕ್ಷಣಗಳು:
2 ವಾರಕ್ಕಿಂತ ಹೆಚ್ಚುದಿನಗಳ ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫ ರಕ್ತ ಬೀಳುವುದು, ಎದೆ ನೋವು, ಕಾರಣವಿಲ್ಲದೆ ಹಸಿವಾಗದಿರುವುದು, ತೂಕ ಇಳಿಕೆಯಾಗುತ್ತಿದ್ದಲ್ಲಿ ಹಾಗೂ ಉಸಿರಾಟದಲ್ಲಿ ತೊಂದರೆ ಕಂಡುಬಂದಲ್ಲಿ ಒಮ್ಮೆ ಕಫ ಪರೀಕ್ಷೆ ಖಡ್ಡಾಯವಾಗಿ ಮಾಡಿಸಿ ಎಂದರು.
ಈ ಸಂದರ್ಭದಲ್ಲಿ ಜನರಲ್ ಮ್ಯಾನೇಜರ್ ಪ್ರವೀಣ್ ಕೋಟ, ಒಹೆಚ್‌ಸಿ ವೈದ್ಯಾಧಿಕಾರಿ ಡಾ.ಪ್ರೀತಿ ಲತಾ, ಡಾ.ಸೋನಿಯ, ಕ್ಷಯರೋಗ ವಿಭಾಗದ ಅನಿಲ್ ಕುಮಾರ್, ಶೇಷಾವಲಿ, ಚಂದ್ರಶೇಖರ್, ಅಭಿಲಾಶ್, ಶಿವರಾಮ್ ಶ್ರೀನಿವಾಸ್ ಸೇರಿದಂತೆ ಕಾರ್ಮಿಕರು ಹಾಗೂ ಇತರರು ಉಪಸ್ಥಿತರಿದ್ದರು.