ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಹತ್ತಿಕ್ಕಲು ಯತ್ನ: ಪೊಲೀಸ್ ಆಯುಕ್ತರ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಕೆಂಡ

ರಾಮನಗರ, ಫೆ.3 :      ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಹತ್ತಿಕ್ಕಲು ಬೆಂಗಳೂರು ಕಮಿಷನರ್ 144 ಸೆಕ್ಷನ್  ಜಾರಿಗೊಳಿಸಿದ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪ್ರತಿಭಟನೆ ಮಾಡಬೇಡಿ ಎಂದರೆ ಭೂಮಿ  ಇವರಪ್ಪನ ಮನೆ ಆಸ್ತಿನಾ, ಹೊಸ ವ್ಯವಸ್ಥೆ ತರಲು ಇವರಿಗೆ ಅವಕಾಶ ಕೊಟ್ಟಿದ್ದು ಯಾರು ?  ಎಂದು ಭಾಸ್ಕರ್ ರಾವ್ ವಿರುದ್ಧ ಹರಿಹಾಯ್ದಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಅಧಿಕಾರಿಗಳ ಉದ್ಧಟತನವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ  ಧೂಳಿಪಟ ಆಗಿ ಹೋಗುತ್ತೀರಿ ಎಂದು ಎಚ್ಚರಕೆ ನೀಡಿದರು.

  ಬಿಸಿಯೂಟದ ಯೋಜನೆ ಖಾಸಗೀಕರಣ  ಮಾಡುವ ವಿಚಾರ ಕೇಳಿಬರುತ್ತಿದೆ. ಇದು ಯಾರೋ ನಾಲ್ಕು  ಜನ ದುಡ್ಡು ತಿನ್ನಲು ಮಾಡಿರುವ  ತೀರ್ಮಾನ.  ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು, ಯಾರೋ ಮಧ್ಯವರ್ತಿ ದುಡ್ಡು ತಿನ್ನಲು  ಅವಕಾಶ ಮಾಡಿಕೊಡಬಾರದು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು.

ಕೇಂದ್ರದಿಂದ ಕರ್ನಾಟಕದ ತೆರಿಗೆ ಪಾಲು ಕಡಿತ ವಿಚಾರವನ್ನು  ಪ್ರಸ್ತಾಪಿಸಿದ ಅವರು,  ರಾಜ್ಯವನ್ನು ದೇವರೇ ಕಾಪಾಡಬೇಕು.  ಈ ಬಾರಿ ರಾಜ್ಯಕ್ಕೆ 9ರಿಂದ  11 ಸಾವಿರ ಕೋಟಿ ಖೋತಾ ಮಾಡಿದ್ದಾರೆ. ಈಗಾಗಲೇ 30 ಸಾವಿರ ಕೋಟಿ ಯೋಜನೆಗಳ ಅನುದಾನವನ್ನು  ಕಡಿತ ಮಾಡಿದ್ದಾರೆ ಎಂದು ಹೇಳಿದರು. 

ಈ  ಸರ್ಕಾರದಲ್ಲಿ ಮಂತ್ರಿ ಮಂಡಲ ರಚನೆ ಮಾಡುವುದೇ ದುಸ್ಸಾಹಸವಾಗಿದೆ. ಈ ಪುಣ್ಯಾತ್ಮರು  ಅದನ್ನೇ ಮಾಡುತ್ತಾರೋ ಅಥವಾ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಾರೋ, ಆ ದೇವರೇ  ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.

ನೆರೆ ಸಂತ್ರಸ್ತರಿಗೆ ಬೆಳಗಾವಿಯಲ್ಲಿ 10  ಸಾವಿರದ ಚೆಕ್ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ  ರೈತರಿಗೆ, ಯುವಕರಿಗೆ ಯಾವ ನಿರೀಕ್ಷೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಮಂತ್ರಿ  ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ವಿಚಾರ ಪ್ರಸ್ತಾಪಿಸಿದ ಅವರು,  ನೂತನ ಶಾಸಕರು  ಸಚಿವರಾಗುವುದು, ಆಗದಿರುವುದು ತಮಗೆ ಸಂಬಂಧಪಟ್ಟ ವಿಚಾರ ಅಲ್ಲ. ಪಾಪ ಬಿಜೆಪಿ ಸರ್ಕಾರ  ತರುವುದಕ್ಕೆ ಅವರು ಕಷ್ಟಪಟ್ಟಿದ್ದಾರೆ. ಅದು ಅವರ ಹಣೆಬರಹ ಎಂದು ಎಚ್‌ಡಿಕೆ  ವ್ಯಂಗ್ಯವಾಡಿದರು.

ಪುತ್ರ ನಿಖಿಲ್‌ ಮದುವೆಯ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಹಾಗೂ ಮದುವೆ ರಾಮನಗರದಲ್ಲಿ ನಡೆಯಲಿದೆ.  ಫೆಬ್ರವರಿ 10 ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಹಾಗೂ ರಾಮನಗರ-ಚನ್ನಪಟ್ಟಣ ನಡುವೆ ನಡೆಸಲಾಗುವುದು. ಮದುವೆ ಮಾತ್ರ ರಾಮನಗರ -  ಚನ್ನಪಟ್ಟಣ ನಡುವೆ ಮಾಡಲಾಗುವುದು. ನನಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ ಊಟ ಹಾಕಬೇಕೆಂಬ ಆಸೆ ಇತ್ತು. ಮಗನ ಮದುವೆ ಮೂಲಕ ಜನರಿಗೆ ಊಟ ಹಾಕಲು ನಿರ್ಧರಿಸಿದ್ದೇನೆ ಎಂದು ಚನ್ನಪಟ್ಟಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.