ಬೆಂಗಳೂರು, ಜೂನ್ 28: ಮಂಡ್ಯ ಜಿಲ್ಲೆಯಲ್ಲಿ ದುರುದ್ದೇಶದ ರಾಜಕಾರಣ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ನಡೆಸಲುದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ, ರಾಜ್ಯಸಭಾ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ಹಿಂಪಡೆದಿದ್ದಾರೆ.ಯಡಿಯೂರಪ್ಪ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು ಮಂಡ್ಯ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತ ನಮ್ಮ ಬೇಡಿಕೆಗಳನ್ನು ಭಾಗಶಃ ಒಪ್ಪಿರುತ್ತಾರೆ. ಆದ್ದರಿಂದ ಜೂನ್ 29ರಂದು ಮುಖ್ಯಮಂತ್ರಿಗಳ ನಿವಾಸದ ಮುಂದೆ ನಡೆಯಬೇಕಾಗಿದ್ದ ಧರಣಿಯನ್ನು ಹಿಂಪಡೆದಿರುವುದಾಗಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.ಕೆ.ಆರ್.ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಜೆಡಿಎಸ್ ಕಾರ್ಯಕರ್ತ ಎಚ್.ಟಿ. ಮಂಜುಗೆ ಸಕ್ರಮವಾಗಿ ಅನುಮತಿ ಪಡೆದಿದ್ದರೂ ಕ್ರಷರ್ ನಿಲ್ಲಿಸುವಂತೆ ಅಧಿಕಾರಿಗಳ ಮೂಲಕ ಮಂಡ್ಯ ಉಸ್ತುವಾರಿ ಸಚಿವ ಕಿರುಕುಳ ನೀಡುವ ಮೂಲಕ ನಾರಾಯಣ ಗೌಡರು ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಮಂಜು ಅವರು ಕ್ರಷರ್ ನಿಲ್ಲಿಸಿದ್ದಾರೆ. ಸಕ್ರಮವಾಗಿರುವ ಅವರ ಕ್ರಷರ್ಗೆ ಅನುಮತಿ ಕೊಡಿಸುವಂತೆಯೂ ಇಲ್ಲದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಜೂ.29ರಂದು ಧರಣಿ ನಡೆಸುವುದಾಗಿ ಯಡಿಯೂರಪ್ಪಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ನಾರಾಯಣಗೌಡ, ತಂದೆಯ ಸಮಾನರಾಗಿರುವ ದೇವೇಗೌಡರಿಂದಲೇ ರಾಜಕೀಯಕ್ಕೆ ಬಂದಿದ್ದೇನೆ. ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಅವರು ತಮ್ಮ ಮೇಲೆ ಮಾಡಿರುವ ಆರೋಪ ಸತ್ಯವಲ್ಲ. ಯಾರೋ ನೀಡಿದ ತಪ್ಪುಮಾಹಿತಿಗಾಗಿ ಗೌಡರು ಧರಣಿ ಕೂರಬಾರದು. ಕ್ರಷರ್ ಮಾಲೀಕ ಮಂಜು ಅಕ್ರಮವಾಗಿ ಕಲ್ಲು ಕ್ವಾರೆ ನಡೆಸಿದ್ದು, ದಂಡ ಕಟ್ಟಿಲ್ಲ. ಮಾತ್ರವಲ್ಲ ಮೈಸೂರಿನಲ್ಲಿ ಅಕ್ರಮ ಹಣದಲ್ಲಿ ಮನೆ ಕಟ್ಟಿದ್ದಾರೆ. ಇವರ ಕ್ವಾರೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಹಾಳಾಗಿದಕ್ಕೆಲ್ಲ ದಾಖಲೆಗಳಿವೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುವುದಾಗಿ ಹೇಳಿದ್ದರು.