ನವದೆಹಲಿ, ಫೆ 19, ರಾಷ್ಟ್ರ ರಾಜಧಾನಿ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಮೊದಲ ಮಂಗಳವಾರ ಸುಂದರಕಾಂಡ ಪಾರಾಯಣ ಕಾರ್ಯಕ್ರಮ ನಡೆಸುಕೊಂಡು ಬರುತ್ತಿದ್ದಾರೆ. ಇದರಿಂದ ಭಗವಾನ್ ಹನುಮಂತನ ಅನುಗ್ರಹ ಲಭಿಸಲಿದೆ ಎಂದು ಅವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ, ಚಿರಾಗ್ ದೆಹಲಿಯ ಪ್ರಾಚೀನ ಶಿವ ದೇಗುಲದಲ್ಲಿ ಸುಂದರಕಾಂಡ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರಿ ಸಂಖ್ಯೆಯ ಭಕ್ತರು ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸೌರಭ್ ಭಾರದ್ವಾಜ್, ತಾವು ಆಯೋಜಿಸಿರುವ ಸುಂದರಕಾಂಡ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಪಾರಾಯಣ ಕಾರ್ಯಕ್ರಮ ಆಯೋಜಿಸಲು ಪಕ್ಷ ತಮಗೆ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಗವಾನ್ ಹನುಮಂತನ ಅನುಗ್ರಹ, ಸ್ಥಳೀಯರ ಬೆಂಬಲದ ಕಾರಣ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ವಿಜಯ ಸಾಧಿಸಿದೆ ಎಂದು ಹೇಳಿದ್ದಾರೆ.
ಪಾರಾಯಣ ಕಾರ್ಯಕ್ರಮಕ್ಕೆ ಮುಂಗಡ ಕಾಯ್ದಿರಿಸುವಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ತಮ್ಮಂತೆಯೇ ಉಳಿದ ಆಪ್ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಸುಂದರಕಾಂಡ ಪಾರಾಯಣ ನಡೆಸಿದರೆ ಹನುಮಂತನ ಅನುಗ್ರಹ ಲಭಿಸಲಿದೆ ಎಂದು ಅವರು ಹೇಳಿದ್ದಾರೆ. ಸೌರಭ್ ಭಾರದ್ವಾಜ್ ಶಾಸಕರಷ್ಟೇ ಅಲ್ಲ. ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರರೂ ಆಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಸೂಚನೆಯ ಮೇರೆಗೆ ಸುಂದರಕಾಂಡ ಪಾರಾಯಣ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.