ವಿಶ್ವ ಆದಿವಾಸಿ ದಿನಾಚರಣೆ ಯಶಸ್ವಿಗೊಳಿಸಲು ಎಚ್‌.ಪಿ. ಶಿಕಾರಿ ರಾಮು ಕರೆ

ವಿಶ್ವ ಆದಿವಾಸಿ ದಿನಾಚರಣೆ ಯಶಸ್ವಿಗೊಳಿಸಲು ಎಚ್‌.ಪಿ. ಶಿಕಾರಿ ರಾಮು ಕರೆ  H.P. Shikari Ramu calls for making the World Tribal Day celebration a success

ಲೋಕದರ್ಶನ ವರದಿ 

ಕಂಪ್ಲಿ, ಆ.06:  ಈ ಬಾರಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕೇಂದ್ರದ ನೆಹರು ಕ್ರೀಡಾಂಗಣದಲ್ಲಿ ಆ.9ರಂದು ಭಾನುವಾರ ಹರಿಣ ಶಿಕಾರಿ, ಪಾರ್ಧಿ ನೇತೃತ್ವದಲ್ಲಿ ನಡೆಯಲಿರುವ 32ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯದವರು ಭಾಗವಹಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್‌.ಪಿ. ಶಿಕಾರಿ ರಾಮು ಕರೆ ನೀಡಿದರು.  

ಪಟ್ಟಣದ ಶಿಕಾರಿ ಕಾಲೋನಿಯ ತುಳಜಾ ಭವಾನಿ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯು 1995ರಿಂದ ವಿಶ್ವ ಆದಿವಾಸಿ ದಿನಾಚರಣೆಯನ್ನು ಆಚರಿಸುತ್ತಿದೆ. ಕಳೆದ 15 ವರ್ಷಗಳಿಂದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ರಾಜ್ಯದ ವಿವಿಧೆಡೆ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.  

ಕರ್ನಾಟಕದಲ್ಲಿ ಸುಮಾರು 50ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, 2011ರ ಜನಗಣತಿ ಪ್ರಕಾರ ಸುಮಾರು 42.48 ಲಕ್ಷ ಆದಿವಾಸಿ ಜನಸಂಖ್ಯೆ ಇದೆ. ದುಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ, ಕಾತ್ಕರಿ, ಪಾರ್ಧಿ, ಅಡಿಚಂಚೇರ್, ಹರಿಣ ಶಿಕಾರಿ, ರಾಜಗೊಂಡ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳು ಇಂದಿಗೂ ಅಲೆಮಾರಿ ಜೀವನ ನಡೆಸುತ್ತಿರುವುದು ವಿಷಾದನೀಯ ಎಂದು ಹೇಳಿದರು.  

ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಸ್ಥಾಪನೆಯಾಗಿದ್ದು, ರಾಜ್ಯದ ಎಲ್ಲಾ ಮೂಲ ಬುಡಕಟ್ಟು ಸಮುದಾಯಗಳಿಗೆ ಸಂವಿಧಾನಬದ್ಧ ಹಕ್ಕುಗಳು ದೊರೆಯಬೇಕು ಎಂಬುದು ಪರಿಷತ್ತಿನ ಉದ್ದೇಶವಾಗಿದೆ. ಭೂಮಿ, ಜಲ, ಅರಣ್ಯದ ಮೇಲಿನ ಹಕ್ಕುಗಳು ನಮ್ಮ ಜನ್ಮಸಿದ್ಧ ಹಕ್ಕುಗಳಾಗಿವೆ ಎಂದರು.  

ಬುಡಕಟ್ಟು ಸಮುದಾಯದವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ, ಮಹಿಳಾ ಮತ್ತು ಯುವ ಸಬಲೀಕರಣ, ಆರೋಗ್ಯ ಜಾಗೃತಿ ಹಾಗೂ ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವುದು ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.