43 ವರ್ಷಗಳ ನಂತರ ಮೊದಲ ಬಾರಿ ಗುರು ವಂದನೆ ಕಾರ್ಯಕ್ರಮ ಸಂಪನ್ನ

43 ವರ್ಷಗಳ ನಂತರ ಮೊದಲ ಬಾರಿ ಗುರು ವಂದನೆ ಕಾರ್ಯಕ್ರಮ ಸಂಪನ್ನ Guru Vandana program completed for the first time after 43 years

ಲೋಕದರ್ಶನ ವರದಿ 

ಬೆಳಗಾವಿ 25: “ವಿದ್ಯೆ ಧಾರೆ ಎರೆದ ಗುರುಗಳನ್ನು ಸತ್ಕರಿಸಿ ಗೌರವಿಸುವುದು ಭಾರತೀಯ ಸಂಪ್ರದಾಯ. ಇಂದಿನ ವಿದ್ಯಾರ್ಥಿಗಳು ಈ ಪರಂಪರೆಯನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿ'' ಎಂದು ನಿವೃತ್ತ ಶಿಕ್ಷಕ ಎಸ್‌.ಜಿ. ಕುಂಬಾರ ಹೇಳಿದರು. 

43 ವರ್ಷಗಳ ನಂತರ ಮೊದಲ ಬಾರಿಗೆ  ಯಮಕನಮರಡಿಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳ ಸಭಾ ಭವನದಲ್ಲಿ ಕಳೆದ ಶನಿವಾರ ಸಿಇಎಸ್ ಪ್ರೌಢಶಾಲೆಯ 1982-83ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. “ಗುರು-ಶಿಷ್ಯರ ಈ ಆತ್ಮೀಯ ಸಂಬಂಧವನ್ನು ಮುಂದಿನ ಪೀಳಿಗೆಯೂ ಮುಂದುವರಿಸಬೇಕು. ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ವಿದೇಶಿಯರೂ ಅನುಸರಿಸುತ್ತಿದ್ದಾರೆ'' ಎಂದರು. 

ಮತ್ತೊಬ್ಬ ಸರ್ಕಾರ ಮೂರ್ತಿ ಶಿಕ್ಷಕ ಎಸ್‌.ಕೆ. ಘೋಡೆವಾಲೆ ಮಾತನಾಡಿ, “ಎಲ್ಲರೂ ತಮ್ಮ ಜೀವನದಲ್ಲಿ ಪ್ರೀತಿ, ವಿಶ್ವಾಸ ಹಂಚಿಕೊಂಡು ಬದುಕಬೇಕು. ಗುರುವಿನ ಸ್ಥಾನ ಶ್ರೇಷ್ಠವಾದುದು. ಗುರು-ಶಿಷ್ಯರ ಅವಿನಾಭಾವ ಸಂಬಂಧ ಮನಮಿಡಿಯುವಂತಹದ್ದು'' ಎಂದು ತಿಳಿಸಿದರು.ನಿವೃತ್ತ ಶಿಕ್ಷಕರಾದ ಎಸ್‌.ಆರ್‌. ಶೆಟ್ಟರ, ಎಚ್‌.ಎಂ. ಮಮದಾಪುರ, ಎಸ್‌.ಡಿ. ಕಳಶೆಟ್ಟಿ, ಆರ್‌.ಬಿ. ಪಾಟೀಲ ಅವರುಗಳು ಸಹ ಗುರುವಂದನೆ ಸ್ವೀಕರಿಸಿದರು. 

ಹಳೆ ವಿದ್ಯಾರ್ಥಿ ಹಾಗೂ ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವೇದಿಕೆಯಲ್ಲಿ ನಿವೃತ್ತ ಸಿಬ್ಬಂದಿ ಎಸ್‌.ಜಿ. ವಾಘ, ಶ್ರೀಮತಿ ಇಂಗಳಿ ಉಪಸ್ಥಿತರಿದ್ದರು. 

ಲೋಕೇಶ್ ಆಲೂರಿ ಸ್ವಾಗತಿಸಿದರು. ಬಸವರಾಜ ಹಿರೇಮಠ್ ಸತ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಹಳೆ ವಿದ್ಯಾರ್ಥಿಗಳಾದ ಉಮೇಶ ತುಬಚಿ, ಅನೀಲ್  ಮಂಗಾವತಿ, ಭೀಮರಾವ ಜಿನರಾಳಿ, ಸರೋಜನಿ ಕುಲಕರ್ಣಿ, ಗಿರಿಜಾ ತುಬಚಿ, ಓಂ ಪ್ರಕಾಶ್ ಕುಡಚಿ , ಪುಷ್ಪಾ ಪಾಟೀಲ, ಶೋಭಾ ಯಾದವಾಡಿ, ಸುನೀತಾ ದೇಶಪಾಂಡೆ, ಮಲ್ಲಯ್ಯ ಪೂಜಾರಿ. ಪುಷ್ಪ ಪಾಟೀಲ್, ವಾಸುದೇವ ವಾಜಂತ್ರಿ, ಶೋಭಾ ದತ್ತವಾಡೆ ಅವರು ಸತ್ಕಾರ ಮೂರ್ತಿಗಳ ಪರಿಚಯ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಯಮನಪ್ಪ ಗಿರೆನ್ನವರ ವಂದಿಸಿದರು. 

1982-83ನೇ ಸಾಲಿನ ಹಳೆ ವಿದ್ಯಾರ್ಥಿಗಳು ಬೆಂಗಳೂರು ಮುಂಬೈ ಪುಣೆ ಗೋವಾ ಮತ್ತಿತರ ದೂರದ ಊರುಗಳಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗುರುಗಳಿಂದ ಸಸಿಗೆ ನೀಡಿರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ  ಅಗಲಿದ ಶಿಕ್ಷಕರು ಮತ್ತು ಸಹಪಾಠಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.