ಗುರ್ಲಹೊಸೂರ ಸರ್ಕಾರಿ ಉರ್ದು ಶಾಲೆಗೆ ನೂತನ ಕೊಠಡಿಗಳ ಭಾಗ್ಯ: ವಿಶ್ವಾಸ ವೈದ್ಯ

ಗುರ್ಲಹೊಸೂರ ಸರ್ಕಾರಿ ಉರ್ದು ಶಾಲೆಗೆ ನೂತನ ಕೊಠಡಿಗಳ ಭಾಗ್ಯ: ವಿಶ್ವಾಸ ವೈದ್ಯ Gurlahosur Government Urdu School is blessed with new rooms: Vishwas Vaidya


ಸವದತ್ತಿ 22:  ಗುರ್ಲಹೊಸೂರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿಸುವ ನಿಟ್ಟಿನಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಅವರು ಅಧಿಕೃತವಾಗಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.  

2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಈ ಮಹತ್ವದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರೂ. 36 ಲಕ್ಷ ವೆಚ್ಚದ ನಿರ್ಮಿತಿ ಕೇಂದ್ರದ ವತಿಯಿಂದ ಎರಡು ಹೆಚ್ಚುವರಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಶಾಲೆಯಲ್ಲಿ ಎದುರಾಗಿದ್ದ ಸ್ಥಳಾವಕಾಶದ ಕೊರತೆಯನ್ನು ನೀಗಿಸಲು ಈ ಯೋಜನೆ ಸಹಕಾರಿಯಾಗಲಿದೆ.  

ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಕ್ಷೇತ್ರದ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಸುಸಜ್ಜಿತಗೊಳಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ನೂತನ ಕೊಠಡಿಗಳು ಶೀಘ್ರದಲ್ಲಿ ಪೂರ್ಣಗೊಂಡು ಮಕ್ಕಳ ಜ್ಞಾನರ್ಜನೆಗೆ ಪೂರಕವಾಗಲಿ, ಅಲ್ಲದೆ, ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮತ್ತು ಅತ್ಯಂತ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.  

ಈ ನೂತನ ಕಟ್ಟಡ ನಿರ್ಮಾಣದಿಂದ ಶಾಲೆಯಲ್ಲಿ ಈವರೆಗೆ ಇದ್ದ ಕೆಲವು ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಹೆಚ್ಚುವರಿ ಕೊಠಡಿಗಳಿಂದಾಗಿ ವಿದ್ಯಾರ್ಥಿಗಳ ದಟ್ಟಣೆ ಕಡಿಮೆಯಾಗಿ, ನೆಮ್ಮದಿಯಿಂದ ಕಲಿಯಲು ಅವಕಾಶ ಸಿಗಲಿದೆ. ಹೊಸ ಕೊಠಡಿಗಳು ಇಂದಿನ ಆಧುನಿಕ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳನ್ನು ಹೊಂದಿರಲಿವೆ. ಉತ್ತಮ ಮೂಲಸೌಕರ್ಯದಿಂದಾಗಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ ಹಾಗೂ ಗುಣಮಟ್ಟದ ಕಲಿಕೆಗೆ ವೇದಿಕೆ ಸಿದ್ಧವಾಗಲಿದೆ ಎಂದು ಹೇಳಿದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಮುಖ್ಯ ಶಿಕ್ಷಕ ವಿರೂಪಾಕ್ಷಪ್ಪ ಕಂಪ್ಲಿ, ಹನಮಂತ ಪೆಟ್ಲೂರ, ಚಂದ್ರು ಶಾಮರಾಯನವರ, ಬಸವರಾಜ ಅರಮನಿ, ಶಾಹಾಜಾನ ಸಂಗೊಳ್ಳಿ,ದಿಲಾವರ ಸನದಿ,ಹಾಗೂ ಊರಿನ ಮುಖಂಡರು, ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರು,ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.