ನವದೆಹಲಿ, ಮೇ 13,ಕೊರೊನಾ ವೈರಸ್ ಕ್ರಿಕೆಟ್ ಲೋಕವನ್ನು ಸ್ತಬ್ಧವಾಗಿಸಿದ್ದು, ಕ್ರಿಕೆಟ್ ಚಟುವಟಿಕೆಗಳನ್ನು ಮರಳಿ ಯಥಾಸ್ಥಿತಿಗೆ ತರಬೇಕಾದರೆ ಭಾರತ ಅತ್ಯಂತ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ."ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್‌ನ ಸಾವು ಖಚಿತ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತೆ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಡೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತ (ಬಿಸಿಸಿಐ) ಬಿಟ್ಟರೆ ಬೇರೆ ಯಾವ ದೇಶಗಳು ಕೂಡ ಹಣ ಖರ್ಚು ಮಾಡುತ್ತಿಲ್ಲ," ಎಂದು ಪ್ಲೇರೈಟ್ ಫೌಂಡೇಷನ್ ಜೊತೆಗಿನದ ಫೇಸ್‌ಬುಕ್ ಚಾಟ್ ಕಾರ್ಯಕ್ರಮದಲ್ಲಿ ಚಾಪೆಲ್ ಮಾತನಾಡಿದ್ದಾರೆ.
"ಟಿ20 ಕ್ರಿಕೆಟ್‌ಗೆ ನನ್ನ ಯಾವುದೇ ವಿರೋಧವಿಲ್ಲ. ಜನಸಾಮಾನ್ಯರಲ್ಲಿ ಕ್ರಿಕೆಟ್ ಮಾರಾಟ ಮಾಡಲು ಅದು ಉತ್ತಮ ವಿಧಾನ. ಟೆಸ್ಟ್ ಕ್ರಿಕೆಟ್ ಆಯೋಜನೆಗೆ ಹಣಕಾಸು ನಿರ್ವಹಣೆ ದೊಡ್ಡಮಟ್ಟದಲ್ಲಿ ಇರುತ್ತದೆ. ಹೀಗಾಗಿ ಪ್ರತಿಫಲ ಕಡಿಮೆ ಇದ್ದರೂ ಟೆಸ್ಟ್ ನಡೆಸಬೇಕು. ಆದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಸವೋತ್ತಮ ಎಂದಿರುವಾಗ, ಟೆಸ್ಟ್‌ಗೆ ಇನ್ನೂ ಉಳಿಗಾಲವಿದೆ ಎಂಬ ಭರವಸೆ ಕಂಡುಕೊಳ್ಳಬಹುದು," ಎಂದು ಗ್ರೇಗ್ ಹೇಳಿದ್ದಾರೆ.ಚಾಪೆಲ್, ಎರಡು ವರ್ಷ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ವೇಳೆ ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಈ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಪುಸ್ತಕ 'ಪ್ಲೇಯಿಂಗ್ ಇಟ್ ಮೈ ವೇ'ದಲ್ಲಿ ಹೇಳಿಕೊಂಡಿದ್ದರು. ಆಟಗಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸದೆ ಗ್ರೇಗ್ ತಮ್ಮ ಆಲೋಚನೆಗಳನ್ನು ಅನಗತ್ಯವಾಗಿ ಹೇರುವ ಪ್ರಯತ್ನ ಮಾಡಿದ್ದರು ಎಂದು ಸಚಿನ್ ವಿವರಿಸಿದ್ದರು.