ಧರೆಯಲ್ಲಿ ಮಾನವತೆಯ ಬೆಳಕು ಬೀರಿದ ಮಹಾಸಂತ ಕನಕದಾಸರು: ಪ್ರಾ. ಎಸ್‌. ಸಿ. ಪಾಟೀಲ

ಧರೆಯಲ್ಲಿ ಮಾನವತೆಯ ಬೆಳಕು ಬೀರಿದ ಮಹಾಸಂತ ಕನಕದಾಸರು: ಪ್ರಾ. ಎಸ್‌. ಸಿ. ಪಾಟೀಲ Great saint Kanakadasa who shed light on humanity on earth: Prof. S. C. Patil

ಬೆಳಗಾವಿ 08: ಭಕ್ತ ಕನಕದಾಸರು ಮಾನವೀಯತೆಯ ಮಹಾಬೆಳಕನ್ನು ಧರೆಯಲ್ಲಿ ಬೆಳಗಿ ಮನುಕುಲದ ಉದ್ಧಾರಕ್ಕಾಗಿ ಬದುಕನ್ನು ಸವೆಸಿದ ಮಹಾಸಂತ ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್‌. ಸಿ. ಪಾಟೀಲ್ ಅವರು ಅಭಿಪ್ರಾಯಪಟ್ಟರು. ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. 

ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಯಾಗಿರುವ ಕನಕದಾಸರು ದಿವ್ಯವಾದ ಕೀರ್ತನೆಗಳ ರಚಿಸುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಒಯ್ಯಲು ಶ್ರಮಿಸಿದರು. ಸಮಾಜದಲ್ಲಿ ನೆಲೆಯೂರಿರುವ ಜಾತಿ-ಮತ, ಮೇಲು- ಕೀಳು ಮತ್ತು ಸ್ಥಾಪಿತ ಮೌಢ್ಯಗಳ ವಿರುದ್ಧ ತಮ್ಮ ಬರವಣಿಗೆಯ ಮೂಲಕ ಸಮರ ಸಾರಿ ಸಮಸಮಾಜದ ನಿರ್ಮಾಣಕ್ಕಾಗಿ ಕೀರ್ತನೆ -ಕಾವ್ಯಗಳ ಮೂಲಕವೇ ಅರಿವು ಮೂಡಿಸಿದ ದಾಸ ಶ್ರೇಷ್ಠರು ಕನಕದಾಸರು ಎಂದರು. 

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ. ನಾರಾಯಣ ನಾಯ್ಕ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಡವ ಬಲ್ಲಿದ, ಮೇಲು- ಕೀಳು ಎಂಬ ಭೇದವಿಲ್ಲ, ನಮ್ಮ ತನು -ಮನ ಪರಿಶುದ್ಧವಾಗಿದ್ದಲ್ಲಿ ಯಾರು ಕೂಡ ಮಾನವನಿಂದ ಮಹಾದೇವನ ಮಟ್ಟಕ್ಕೆ ಏರಬಲ್ಲ ಎಂಬ ಮಹಾ ಮಾರ್ಗವನ್ನು ಸಮಾಜಕ್ಕೆ ತೋರಿಸಿ ಕೊಟ್ಟವರು ದಾಸರೇಣ್ಯ ಕನಕದಾಸರು. 

ಆಸೆಗಳ ಭೂಮಿಕೆ ಮನಸ್ಸು. ನಮ್ಮ ಎಲ್ಲ ಕಾರ್ಯಸಾಧನೆಗಳಿಗೆ ಮನಸ್ಸು ಅಡ್ಡ ಬರುತ್ತದೆ. ಮನಸ್ಸು ವಿಕಾರವಾದಷ್ಟು ನಮ್ಮ ಆಲೋಚನೆಗಳು, ಚಿಂತನೆಗಳು ವಿಕಾರವಾಗುತ್ತವೆ. ಇವುಗಳ ವಿಕಾರದಿಂದ ಮನಷ್ಯನ ವ್ಯಕ್ತಿತ್ವದ ಲಯ ತಪ್ಪಿ ಆತನು ತನ್ನ ಪರಮ ಉದ್ದೇಶದಿಂದ ವಿಮುಖನಾಗುತ್ತಾನೆ. ಆ ಮನಸ್ಸನ್ನು ನಿಯಂತ್ರಿಸುವುದೇ ನಮ್ಮ ಸಾಧನೆಯ ದಾರಿಯಲ್ಲಿ ಮೊದಲ ಕಾರ್ಯವಾಗಬೇಕು ಎಂಬುದನ್ನು ತೋರಿಸಿದವರು ಕನಕದಾಸರು. ಕನಕದಾಸರು ಬಾಡದಿಂದ ಹಂಪಿ, ಹಂಪೆಯಿಂದ ಉಡುಪಿಯ ಕೃಷ್ಣ ಮಠದ ವರೆಗಿನ ಅವರ ಜೀವನದಲ್ಲಿ ಆದ ಪಲ್ಲಟಗಳು ಅವರ ಜೀವನದ ಮೇಲೆ ಅಪಾರ ಪರಿಣಾಮ ಬೀರಿದೆ. ಅದೆಲ್ಲವನ್ನು ಲೆಕ್ಕಿಸದೇ, ಮನಸ್ಸಿನ ವಿಚಲಿತೆಗೆ ಎಡೆ ಮಾಡಿಕೊಡದೆ ಸಾಧನೆಯ ಪಥವನ್ನು ತಲುಪಿದರು ಎಂದರು. 

ಉಪಪ್ರಾಚಾರ್ಯ ಡಾ. ಅರ್ಜುನ್ ಜಂಬಗಿ, ಕಾರ್ಯಕ್ರಮದ ಸಂಯೋಜಕ ಡಾ. ಸದಾಶಿವ ಮುಗಳಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ವಿದ್ಯಾರ್ಥಿನಿಯರಾದ ರಾಧಿಕಾ ಚವಾಟಗಿ ಪ್ರಾರ್ಥಿಸಿದರು, ಸುಮತಿ ಪೂಜಾರಿ ಸ್ವಾಗತಿಸಿದರು, ವಿದ್ಯಾಶ್ರೀ ಜನಗೌಡ ನಿರೂಪಿಸಿದರು. ಅಪೂರ್ವ ಗಡೇಕರ್ ವಂದಿಸಿದರು.