ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ

ವಿಜಯಪುರ 01: ಜಿಲ್ಲೆಯ ಎಲ್ಲ 13 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2024-25ನೇ ಆರ್ಥಿಕ ವರ್ಷದಲ್ಲಿ ವಸತಿರಹಿತರಿಗೆ ಮನೆ ಕಟ್ಟಲು ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಈ ಮನೆಗಳ ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ(ಇ.ಓ)ಗಳಿಗೆ ಪತ್ರ ಬರೆದಿದ್ದಾರೆ. 

ಈ ಎಲ್ಲ ಮನೆಗಳ ನಿರ್ಮಾಣಕ್ಕೆ ಸರಕಾರ ಎಸ್‌.ಸಿ ಫಲಾನುಭವಿಗಳಿಗೆ ರೂ. 43,750 ಮತ್ತು ಇತರೆ ಫಲಾನುಭವಿಗಳಿಗೆ ರೂ. 30,000 ಅನುದಾನವನ್ನು ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ.  

ಜಿಲ್ಲೆಯ ಆಲಮೇಲ ತಾಲೂಕಿನ 13 ಗ್ರಾ.ಪಂ.ಗಳಲ್ಲಿ 511, ಬಬಲೇಶ್ವರ ತಾಲೂಕಿನ 16 ಗ್ರಾ.ಪಂ.ಗಳಲ್ಲಿ 711, ಬಸವನ ಬಾಗೇವಾಡಿ ತಾಲೂಕಿನ 18 ಗ್ರಾ.ಪಂ.ಗಳಲ್ಲಿ 1053, ಚಡಚಣ ತಾಲೂಕಿನ 13 ಗ್ರಾ.ಪಂ.ಗಳಲ್ಲಿ 823, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ.ಪಂ.ಗಳಲ್ಲಿ 840, ಇಂಡಿ ತಾಲೂಕಿನ 39 ಗ್ರಾ.ಪಂ.ಗಳಲ್ಲಿ 1486, ಕೊಲ್ಹಾರ ತಾಲೂಕಿನ 10 ಗ್ರಾ.ಪಂಗಳಲ್ಲಿ 675, ಮುದ್ದೇಬಿಹಾಳ ತಾಲೂಕಿನ 22 ಗ್ರಾ.ಪಂ.ಗಳಲ್ಲಿ 1307, ನಿಡಗುಂದಿ ತಾಲೂಕಿನ 11 ಗ್ರಾ.ಪಂ.ಗಳಲ್ಲಿ 207, ಸಿಂದಗಿ ತಾಲೂಕಿನ 18 ಗ್ರಾ.ಪಂ.ಗಳಲ್ಲಿ 457, ತಾಳಿಕೋಟಿ ತಾಲೂಕಿನ 14 ಗ್ರಾ.ಪಂ.ಗಳಲ್ಲಿ 774, ತಿಕೋಟಾ ತಾಲೂಕಿನ 15 ಗ್ರಾ.ಪಂ.ಗಳಲ್ಲಿ  771, ವಿಜಯಪುರ ತಾಲೂಕಿನ 17 ಗ್ರಾ.ಪಂ.ಗಳಲ್ಲಿ 770 ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣ ಜಮೆ ಆಗುತ್ತಿದೆ.  

ಗ್ರಾ. ಪಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಜಿ.ಪಿ.ಎಸ್ ಮಾಡಿಸಿ, ವಸತಿರಹಿತ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಅಲ್ಲದೇ, ಜಿ.ಪಿ.ಎಸ್ ಮಾಡಿದ ಪ್ರತಿಯನ್ನು ವಿಧಾನ ಪರಿಷತ್ ಶಾಸಕರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ಅವರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.