ಜಿ.ಎಂ. ಮುಂಡಿನಮಠ ನಿವೃತ್ತಿ ಅಂಗವಾಗಿ ಅಭಿಮಾನಿಗಳಿಂದ ಅದ್ಧೂರಿ ಅಭಿನಂದನಾ ಸಮಾರಂಭ

ಜಿ.ಎಂ. ಮುಂಡಿನಮಠ ನಿವೃತ್ತಿ ಅಂಗವಾಗಿ ಅಭಿಮಾನಿಗಳಿಂದ ಅದ್ಧೂರಿ ಅಭಿನಂದನಾ ಸಮಾರಂಭ  Grand felicitation ceremony organized by admirers for G.M. Mundinamatha on the occasion of his retir


ಲಕ್ಷ್ಮೇಶ್ವರ 02 : ಪಟ್ಟಣದ ಗದಗ ರಸ್ತೆಯಲ್ಲಿರುವ ಬಾಳೇಹಳ್ಳಿ ಅವರ ಕಲ್ಯಾಣ ಮಂಟಪದಲ್ಲಿ ಸುಮಾರು 34 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಎಂ. ಮುಂಡಿನಮಠ ದಂಪತಿಗಳಿಗೆ ಅಭಿಮಾನಿಗಳ ಬಳಗದ ವತಿಯಿಂದ ಅದ್ಧೂರಿ ಅಭಿನಂದನಾ ಸಮಾರಂಭ ನಡೆಯಿತು. ಜಿ.ಎಂ. ಮುಂಡಿನಮಠ ಅವರು ಶಿಕ್ಷಕರಾಗಿ ಸೇವೆ ಆರಂಭಿಸಿ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಡಯಟ್ ಉಪ ಪ್ರಾಂಶುಪಾಲರಾಗಿ ಹಾಗೂ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಶಿಕ್ಷಣ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.

ಅಭಿನಂದನಾ ಕಾರ್ಯಕ್ರಮದಲ್ಲಿ ಮುಂಡಿನಮಠ ದಂಪತಿಗಳನ್ನು ಅಭಿಮಾನಿಗಳು ವಿವಿಧ ಪುಷ್ಪಗಳಿಂದ ಸನ್ಮಾನಿಸಿದರು. ಬನ್ನಿ ಪತ್ರೆ, ಗುಲಾಬಿ ಹೂವು, ದಾಸವಾಳ, ಸೇವಂತಿಗೆ, ಚೆಂಡು ಹೂವು ಸೇರಿದಂತೆ ಹಲವು ಹೂಗಳಿಂದ ಗೌರವ ಸಲ್ಲಿಸಲಾಯಿತು. ಡಾ. ಬಿ.ಆರ್‌. ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳನ್ನು ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.  

ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಹಂತಗಳನ್ನು ಏರಿ ಉತ್ತಮ ಸೇವೆ ಸಲ್ಲಿಸಿದ ಜಿ.ಎಂ. ಮುಂಡಿನಮಠ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು. ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಮತ್ತು ಮುಂದೆಯೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಅವಕಾಶ ದೊರೆಯಲಿ ಎಂದು ಶುಭ ಹಾರೈಸಿದರು.  

ಹಿರಿಯ ಮುಖಂಡರಾದ ಸಣ್ಣ ವೀರ​‍್ಪ ಹಳೇಪ್ಪನವರ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ. ಜಿ.ಎಂ. ಮುಂಡಿನಮಠ ಅವರು ಅಪಾರ ಅಭಿಮಾನಿ ಬಳಗ ಹೊಂದಿರುವುದು ಅವರ ಉತ್ತಮ ಸೇವೆಗೆ ಸಾಕ್ಷಿಯಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಜೂನಿಯರ್ ಶಂಕರ್ ನಾಗ್ ಅವರು ಹಾಡಿದ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಮಾಜಿ ಶಾಸಕರಾದ ಜಿ.ಎಸ್‌. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಎಸ್‌.ಎಸ್‌. ಪಟ್ಟಣಶೆಟ್ಟಿ, ಡಾ. ಜಿ.ಎಚ್‌. ಇಮ್ರಾಪುರ, ಶಣಬಸಪ್ಪ ಪಾಟೀಲ, ಸುಲೇಮಾನ್ ಸಾಬ್ ಕಾಣಿ ಸೇರಿದಂತೆ ಹಲವು ಗಣ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಿದ್ದರು.