ಬೆಂಗಳೂರು, ಆ 30 ರಾಜ್ಯಪಾಲ ವಜುಭಾಯ್ ವಾಲಾ ಅವರ ಅಧಿಕಾರಾವಧಿ ನಾಳೆ ಅಂದರೆ ಆಗಸ್ಟ್ 31ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನೂತನ ರಾಜ್ಯಪಾಲರ ನೇಮಕಕ್ಕೆ ಕೇಂದ್ರ ಸರ್ಕಾರ ಕಸರತ್ತು ಆರಂಭಿಸಿದೆ. ಸೆಪ್ಟೆಂಬರ್ 1, 2014 ರಂದು ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ವಜಭಾಯ್ ವಾಲಾ ಅವರ ಐದು ವರ್ಷಗಳ ಅಧಿಕಾರದ ಅವಧಿ ಆಗಸ್ಟ್ 31 ಕ್ಕೆ ಕೊನೆಯಾಗಲಿದೆ. ಈ ಮೊದಲು ಮುಂದಿನ ರಾಜ್ಯಪಾಲರ ರೇಸ್ ನಲ್ಲಿ ಮೂವರು ಮಹಿಳೆಯರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ ಸುಷ್ಮಾ ಸ್ವರಾಜ್ ಅವರ ನಿಧನದಿಂದಾಗಿ, ಇದೀಗ ಉಮಾಭಾರತಿ ಅಥವಾ ಸುಮಿತ್ರಾ ಮಹಾಜನ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಾವಧಿಯಲ್ಲಿ ವಜುಭಾಯ್ ವಾಲಾ ಅವರು ಒಂದಿಲ್ಲೊಂದು ವಿವಾದ, ಆರೋಪಗಳಿಗೆ ತುತ್ತಾಗಿದ್ದರು. ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ವೇದಿಕೆಯಿಂದ ನಿರ್ಗಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ದೃಶ್ಯಾವಳಿಯನ್ನು ಖಾಸಗಿ ಸುದ್ದಿವಾಹಿನಿಗಳು ಪ್ರಸಾರ ಮಾಡಿದ ಬಳಿಕ ಹೆಚ್ಚಿನ ಖಾಸಗಿ ವಾಹಿನಿಗಳು, ಮಾಧ್ಯಮದವರಿಗೆ ರಾಜಭವನ ಪ್ರವೇಶ ಅಷ್ಟೇನು ಸುಲಭದ್ದಾಗಿರಲಿಲ್ಲ. ರಾಜಭವನದಲ್ಲಿ ನಡೆಯುತ್ತಿದ್ದ ಬಹುತೇಕ ಕಾರ್ಯಕ್ರಮಗಳಿಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸುವ ಮೂಲಕವೂ ವಜುಭಾಯ್ ವಾಲಾ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸಲಾಗಿತ್ತು. ಇದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದರು. ಇಡೀ ನಾಡು, ಕನ್ನಡ ರಾಜ್ಯೊ?ತ್ಸವ ಸಂಭ್ರಮದಲ್ಲಿರುವಾಗ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸುವುದು ಎಷ್ಟು ಸರಿ ? ಎಂದು ಕನ್ನಡಿಗರು ಪ್ರಶ್ನಿಸಿದ್ದರು. ಬಿಜೆಪಿಯ ಹಿನ್ನೆಲೆಯಿಂದ ಬಂದ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ಅವರು ಈ ಹಿಂದೆ ಕರ್ನಾಟಕದ ಆಡಳಿತ ಭಾಷೆ ಕನ್ನಡದಲ್ಲೂ ಮಾತನಾಡದೇ, ತಮ್ಮ ಮಾತೃಭಾಷೆ ಗುಜರಾತಿಯಲ್ಲೂ ಮಾತನಾಡದೇ ಹಿಂದಿ ಭಾಷೆಯ ಪ್ರಚಾರಕರಂತೆ ವತರ್ಿಸಿದ್ದಾರೆ ಎಂಬ ಆರೋಪವನ್ನು ಹೊತ್ತಿದ್ದಾರೆ. ಮೈತ್ರಿ ಸರ್ಕಾರದ ಪತನದ ವೇಳೆಯೂ ರಾಜ್ಯಪಾಲರು ನಿಷ್ಟಕ್ಷಪಾತವಾಗಿ ವರ್ತಿಸಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ವಿಧಾನಸಭೆ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಯವರಿಗೆ ಎರಡೆರಡು ಬಾರಿ ಪತ್ರ ಬರೆದು ವಿಶ್ವಾಸಮತ ಯಾಚಿಸಲು ಕಾಲಮಿತಿ ನಿಗದಿಪಡಿಸಿದ್ದರು. ಇದು ಕೂಡ ರಾಜ್ಯಪಾಲ ವಿರುದ್ಧ ಮೈತ್ರಿ ಪಕ್ಷಗಳು ತಿರುಗಿ ಬೀಳುವಂತೆ ಮಾಡಿತ್ತು. ಒಟ್ಟಿನಲ್ಲಿ ತಮ್ಮ 5 ವರ್ಷಗಳ ಅಧಿಕಾರಾವಧಿಯಲ್ಲಿ ಹಲವು ವಿವಾದಗಳಿಗೆ ಗುರಿಯಾಗಿದ್ದ ವಜುಭಾಯಿ ವಾಲಾ ಕನ್ನಡಿಗರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಲಾರರು ಎಂಬುದು ಮಾತ್ರ ಸತ್ಯ.