ಬಿದಿರು ಬೆಳೆಯುವವರಿಗೆ ಸರ್ಕಾರದಿಂದ ಪ್ರೋತ್ಸಾಹ: ಸಚಿವ ಎಚ್.ನಾಗೇಶ್

ಕೋಲಾರ, ಫೆ.6 :    ಜಿಲ್ಲೆಯಲ್ಲಿ ಬಿದಿರು ಬೆಳೆ ತೀರಾ ಕಡಿಮೆ ಇದ್ದು, ಈ ಬೆಳೆ ಬೆಳೆಯುವವರಿಗೆ ಸರ್ಕಾರ  ಪ್ರೋತ್ಸಾಹ ನೀಡುತ್ತಿದೆ. ವಾಣಿಜ್ಯವಾಗಿಯೂ ಬಿದಿರಿಗೆ ಉತ್ತಮ ಮೌಲ್ಯ ಇದೆ. ಅದನ್ನು ಬೆಳೆಯಲು ರೈತರು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿ.ಪಂ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕುರಿತು ರೈತರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶ್ರೀಗಂಧ  ಲಾಭದಾಯಕ ಬೆಳೆ. ಕೃಷಿ ಅರಣ್ಯೀಕರಣದಡಿ ಕೆಲವೊಂದು ಜಾತಿಯ ಗಿಡಮರಗಳ ಬೆಳೆಗೆ ವಿಮಾ  ಸೌಲಭ್ಯ ಇಲ್ಲದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಜಿಲ್ಲೆಯ ಅನುಕೂಲಕ್ಕೆ, ನೀರಿನ ಲಭ್ಯತೆಗೆ ಅನುಗುಣವಾಗಿ ಏನು ಬೆಳೆಯಬಹುದು ಎಂಬುದನ್ನು ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿಸಿಕೊಡಬೇಕು. ಸರ್ಕಾರ ಅನುದಾನ ನೀಡುತ್ತದೆ ಎಂದು ಕಾರ್ಯಾಗಾರ ನಡೆಸಿ ಹೋದರೆ  ಪ್ರಯೋಜನ ಆಗುವುದಿಲ್ಲ. ಇದರಿಂದ ರೈತರಿಗೆ ಏನು ಉಪಯೋಗ ಆಗಿದೆ, ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಕೋಲಾರ, ನರಸಾಪುರ ಸುತ್ತಮುತ್ತಲ ಭಾಗಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳಕ್ಕೆ ಅನುಕೂಲವಾಗಿದೆ. ಕುಡಿಯುವ ನೀರಿಗೆ ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಳ್ಳಬೇಕು. ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಜಿಪಂ ಜನಪ್ರತಿನಿಗಳು ಇಲಾಖೆ ಅಽಕಾರಿಗಳನ್ನು ಒಳಗೊಂಡು ಯೋಜನಾ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು. ಯೋಜನೆ ಸಂಬಂಧ ಇರುವ ಸಮಸ್ಯೆ ಬಗೆಹರಿಸಲು ಸಚಿವ ಮಾಧುಸ್ವಾಮಿ ಕೂಡ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಯೋಜನೆಯಡಿ ಜಿಲ್ಲೆಗೆ ನೀರು ತಂದೇ ತರುತ್ತೇನೆ, ಇದು ನನ್ನ ಶಪಥ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಅಜಯ್ ಮಿಶ್ರಾ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ನಡೆದ ಸರ್ವೇಯಲ್ಲಿ ರಾಜ್ಯದಲ್ಲಿ 1025 ಚದರ ಕಿಮೀ ಅರಣ್ಯ ಹೆಚ್ಚಳವಾಗಿರುವುದು ಕಂಡುಬಂದಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಣ್ಯೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳಿದೆ. ಕೃಷಿ ಬೆಳೆಗಳು ಪ್ರತಿಕೂಲ ವಾತಾವರಣದಿಂದ ಬೆಳೆ, ದರದಲ್ಲಿ ವ್ಯತ್ಯಾಸ ಆಗುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿಸಲು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಲ್ಲಿ ಕೃಷಿ ಅರಣ್ಯವೂ ಮುಖ್ಯವಾದುದು. ಮುಂಗಾರು, ಹಿಂಗಾರು ವ್ಯತ್ಯಾಸ ಆದ ಸಂದರ್ಭದಲ್ಲಿ  ಕೃಷಿ ಬೆಳೆ ನಾಶವಾಗಬಹುದು. ಆದರೆ ಬರ ಬೆಳೆ ಇದ್ದರೆ ನಷ್ಟ ಆಗುವುದಿಲ್ಲ. ಹೆಬ್ಬೇವು, ಶ್ರೀಗಂಧ, ಹುಣಸೆ , ನುಗ್ಗೆ, ಬೆಟ್ಟದ ನೆಲ್ಲಿ ಇನ್ನಿತರೆ ಜಾತಿಯ ಗಿಡಮರಗಳನ್ನು ಬೆಳೆಸುವುದರಿಂದ ಅವುಗಳಿಂದಲೂ ಆದಾಯ ಗಳಿಸಬಹುದು ಎಂದು ತಿಳಿಸಿದರು.