ಸರ್ಕಾರದ ಯೋಜನೆಗಳು ಜನರ ಜೀವನಕ್ಕೆ ಬೆಳಕು ನೀಡುವಂತಾಗಬೇಕು: ಶಾಸಕ ಭೀಮಣ್ಣ ನಾಯ್ಕ

ಸರ್ಕಾರದ ಯೋಜನೆಗಳು ಜನರ ಜೀವನಕ್ಕೆ ಬೆಳಕು ನೀಡುವಂತಾಗಬೇಕು: ಶಾಸಕ ಭೀಮಣ್ಣ ನಾಯ್ಕ  Government schemes should bring light to people's lives: MLA Bhimanna Naik

ಸರ್ಕಾರದ ಯೋಜನೆಗಳು ಜನರ ಜೀವನಕ್ಕೆ ಬೆಳಕು ನೀಡುವಂತಾಗಬೇಕು: ಶಾಸಕ ಭೀಮಣ್ಣ ನಾಯ್ಕ  

ಕಾರವಾರ  12: ಸರ್ಕಾರದ ಜನಪರ ಯೋಜನೆಗಳು ಕೇವಲ ಪಟ್ಟಿಯಲ್ಲಿ ಉಳಿಯದೆ ಬಡವರು ಹಾಗೂ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವುದರ ಜೊತೆಗೆ ಅವರ ಜೀವನಕ್ಕೆ ಬೆಳಕು ನೀಡುವಂತಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ದಾಪುರ ತಾಲೂಕಿನ ಹಲಿಗೇರಿ ಹೋಬಳಿಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸರ್ಕಾರದ ಯೋಜನೆಗಳು ಹಾಗೂ ಸೇವೆಗಳು ಜನರ ಬದುಕಿನಲ್ಲಿ ಬೆಳಕು ಮೂಡಿಸಬೇಕು ಎಂಬ ಉದ್ದೇಶದಿಂದ ‘ಪ್ರಜಾಸೇವೆ ಆಂದೋಲನ’ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲಾ-ಕಾಲೇಜು ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಈ ಸಭೆಗಳು ಸಹಕಾರಿಯಾಗಿವೆ ಎಂದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ 1.20 ಕೋಟಿಗೂ ಅಧಿಕ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿವೆ. ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.  

ಯುವಕರನ್ನು ಸಂಘಟಿಸಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ‘ಭಾರತ್ ಜೋಡೋ’ ಯುವ ಸಂಘಟನೆ ಮೂಲಕ ಯುವಶಕ್ತಿಯನ್ನು ಸಬಲೀಕರಣ ಗೊಳಿಸ ಲಾಗುತ್ತಿದ್ದು, ಈ ಸಂಘಟನೆಗಳಿಗೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು. 600ಕ್ಕೂ ಅಧಿಕ ಅಹವಾಲು ಸ್ವೀಕಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ‘ಪ್ರಜಾಸೇವೆ ಆಂದೋಲನ’ವು ಸಾರ್ವಜನಿಕರ ಅಹವಾಲುಗಳನ್ನು ತ್ವರಿತವಾಗಿ ಆಲಿಸಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ವಿನೂತನ ಅಭಿಯಾನವಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಆನ್ಲೈನ್ನಲ್ಲಿ ದಾಖಲಿಸಿ, 20 ದಿನಗಳೊಳಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.  

ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಇದನ್ನು ಎದುರಿಸಲು ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಅನುದಾನ ಮಂಜೂರು ಮಾಡಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಸಭೆಯಲ್ಲಿ ಸಾರ್ವಜನಿಕರಿಂದ 600ಕ್ಕೂ ಅಧಿಕ ಅಹವಾಲು ಅರ್ಜಿಗಳು ಸ್ವೀಕರಿಸಲಾಯಿತು. ಗ್ರಾಮೀಣಾಭಿವೃದ್ಧಿ ಇಲಾಖೆ, ವಸತಿ ಯೋಜನೆ, ಗ್ರಾಮೀಣ ರಸ್ತೆ ದುರಸ್ತಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು.  

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೀಲೀಷ್ ಶಶಿ ಮಾತನಾಡಿ, ‘ಪ್ರಜಾಸೇವೆ’ ಕೇವಲ ಸಮಸ್ಯೆಗಳನ್ನು ಹೇಳಿಕೊಳ್ಳುವ ವೇದಿಕೆಯಲ್ಲ. ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕರ ಸಲಹೆಗಳನ್ನೂ ಅಧಿಕಾರಿಗಳ ಗಮನಕ್ಕೆ ತರಬಹುದು. ಇಂತಹ ಸಲಹೆಗಳು ಮುಂದಿನ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿವೆ ಎಂದರು.  

ಭೂ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಮನವಿ  

ಸರ್ಕಾರ ಭೂ ಗ್ಯಾರಂಟಿ ಯೋಜನೆಯಡಿ ರಾಜ್ಯದ ನಿವೇಶನರಹಿತರಿಗೆ 5 ಲಕ್ಷ ನಿವೇಶನಗಳನ್ನು ನೀಡುವ ಕಾರ್ಯಕ್ರಮ ಜಾರಿಗೊಳಿಸಿದ್ದು, ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 7,000ರಿಂದ 8,000 ನಿವೇಶನಗಳು ದೊರೆಯುವ ನೀರೀಕ್ಷೆಯಿದೆ. ನಿವೇಶನರಹಿತರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಮನವಿ ಮಾಡಿದರು.  

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ಭೂ ಗ್ಯಾರಂಟಿ ಯೋಜನೆಯಡಿ ನಿವೇಶನ ನೀಡಲು ಜಿಲ್ಲೆಯಲ್ಲಿ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹಲಿಗೇರಿ ಹೋಬಳಿಯಲ್ಲಿ 63 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲೆಯ ನಿವೇಶನರಹಿತರು ಅರ್ಜಿ ಸಲ್ಲಿಸುವ ಕುರಿತು ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು. ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯಕ್ರಮಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್‌. ಮಾತನಾಡಿ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ‘ಆಸರೆ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.  

ಆನ್ಲೈನ್ ವಂಚನೆ ಹಾಗೂ ಸಂಶಯಾಸ್ಪದ ಲಿಂಕ್ಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಅವರು, ಅಪರಿಚಿತ ಅಥವಾ ಅನಾವಶ್ಯಕ ಲಿಂಕ್ಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದರು. ಯುವಜನರು ಮಾದಕವಸ್ತುಗಳಿಂದ ದೂರವಿದ್ದು, ಪೊಲೀಸ್ ಇಲಾಖೆಯ ಜನಸ್ನೇಹಿ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.  

ಸಭೆಯಲ್ಲಿ ಅಪಾಯಕಾರಿ ಮರಗಳ ತೆರವು, ವನ್ಯಜೀವಿಗಳಿಂದ ಬೆಳೆ ಹಾನಿ ತಡೆ, ಅತಿಕ್ರಮಣ ತೆರವು, ಬಸ್ ಸೌಲಭ್ಯ, ಕಂದಾಯ ದಾಖಲೆ ತಿದ್ದುಪಡಿ ಹಾಗೂ ಪಡಿತರ ಚೀಟಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.  

ಅತಿಕ್ರಮಣ ತೆರವು ಕುರಿತ ಗೊಂದಲಗಳ ಬಗ್ಗೆ ಸೆ. 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ವನ್ಯಜೀವಿ ಹಾವಳಿ ತಡೆಯಲು ಅಗತ್ಯವಿರುವ ಕಡೆಗಳಲ್ಲಿ ಕಂದಕ ನಿರ್ಮಾಣ ಹಾಗೂ ಸೋಲಾರ್ ಬೇಲಿ ಅಳವಡಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್‌. ಸೂರ್ಯವಂಶಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಉಪವಿಭಾಗಾಧಿಕಾರಿ ಚಂದ್ರಶೇಖರ್ ಆರಿ​‍್ಜ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಎಂ. ಹಿತ್ತಲಕೊಪ್ಪ, ತಹಶೀಲ್ದಾರ್ ಮಂಜುಳಾ ನಾಯಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಪಾಲನೆ ಇಲಾಖೆಗಳ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಹಾಗೂ ವಿಕಸಿತ ಗ್ರಾಮ ಯೋಜನೆಯಡಿ ಜಾಬ್ ಕಾರ್ಡ್ಗಳನ್ನು ವಿತರಿಸಲಾಯಿತು.