ಬೆಂಗಳೂರು, ಮಾ 19 ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸರ್ಕಾರ ಸಜ್ಜಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಡ್ರಗ್ಸ್ ಮಾಫಿಯಾದಲ್ಲಿರುವ 330ಜನರನ್ನು ಜಾಲಾಡಿ ಬಂಧಿಸಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.
ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಮತ್ತಿತರರ ಪ್ರಸ್ತಾಪಗಳಿಗೆ ಉತ್ತರಿಸಿದ ಅವರು, ಶಾಲಾ ಮಕ್ಕಳಿಗೆ ಡ್ರಗ್ಸ್ ಹುಚ್ಚು ಹಿಡಿಸಲು ಒಂದು ವರ್ಗ ಪ್ರಚೋದನೆ ಮಾಡುತ್ತಿದೆ. ವಸತಿ ನಿಲಯ, ಶಿಕ್ಷಣ ಸಂಸ್ಥೆಗಳು, ಬೀಡ ಅಂಗಡಿಗಳಲ್ಲಿ ಡ್ರಗ್ಸ್ ವ್ಯಾಪಾಕವಾಗಿ ಹರಡುತ್ತಿದೆ. ಈಗಾಗಲೇ ಡ್ರಗ್ಸ್ ತಡೆಗೆ ಗಲ್ಲಿ ಗಲ್ಲಿಯಲ್ಲಿ ಪೊಲೀಸ್ ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಮಾಫಿಯಾ ತಡೆಯಲು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ .ಮಾರಾಟ, ಸಾಗಾಟ, ಸೇವನೆ ಮಾಡುವರರನ್ನು ನಾವು ಹಿಡಿದಿದ್ದೇವೆ.ಈ ಮಾಫಿಯಾದಲ್ಲಿ ತೊಡಗಿರುವರು ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಅಂತವರ ವಿರುದ್ಧ ನಾವು ಏನೇ ಕ್ರಮ ಕೈಗೊಂಡರೂ ಸಹ ಅವರೆಲ್ಲಾ ಜಾಮೀನಿನ ಮೇಲೆ ಹೊರಗೆ ಬರುತ್ತಿದ್ದಾರೆ. ಅವರ ವೀಸಾ ಅವಧಿ ಮುಗಿದಿದ್ದರೂ ಅವರವರ ದೇಶಕ್ಕೆ ಹಿಂದಿರುಗುತ್ತಿಲ್ಲ. ಬದಲಿಗೆ ಯಾವುದಾದರೂ ಪ್ರಕರಣದಲ್ಲಿ ಸಿಲುಕಿಕೊಂಡು ಪ್ರಕರಣ ಮುಗಿಯುವ ತನಕ ಇಲ್ಲೇ ಇರುವ ತಂತ್ರ ರೂಪಿಸುತ್ತಿದ್ದಾರೆ. ಇದೀಗ ಅವರ ವಿರುದ್ಧ ದಂಡನೀಯ ಕಾನೂನು ಪ್ರಯೋಗವಾಗುತ್ತಿದ್ದು, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುತ್ತಿದ್ದೇವೆ. ಅವರು ಎರಡು ವರ್ಷ ಜೈಲಿಂದ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.’
ಆ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ. ಇನ್ನು ಎರಡು ವಾರಗಳಲ್ಲಿ ಹಲವು ಜನರು ಪ್ರಕರಣದಲ್ಲಿ ಸಿಲುಕಲಿದ್ದಾರೆ. ಅವರನ್ನು ಶಾಶ್ವತವಾಗಿ ಒಳಗೆ ಹಾಕುತ್ತೇವೆ. ಬೆಳಗಾವಿ, ಕಾರವಾರದಲ್ಲೂ ಇವರ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಆರು ತಿಂಗಳಲ್ಲಿ ಒಟ್ಟು 1600 ಕೇಸ್ ಗಳನ್ನು ದಾಖಲಿಸಲಾಗಿದೆ. ಅಂತರರಾಷ್ಟ್ರೀಯ ವೆಬ್ ನಲ್ಲಿ ಡ್ರಗ್ಸ್ ಬೃಹದಾಕಾರವಾಗಿ ಬೆಳೆಯುತ್ತಿದೆ. ಇಂತಹ ಡೀಲ್ ಮಾಡುತ್ತಿದ್ದವರನ್ನು ಹಿಡಿದಿದ್ದೇವೆ. ಅಂತರಾಷ್ಟ್ರೀಯ ಡೀಲರ್ ಗಳನ್ನು ನಾವು ಹೆಡೆಮುರಿ ಕಟ್ಟಿದ್ದೇವೆ ಎಂದರು.
ರಾಜ್ಯದಲ್ಲಿ ಒಟ್ಟು 395ಅಕ್ರಮ ಬಾಂಗ್ಲಾ ವಲಸಿಗರು ವಾಸವಾಗಿದ್ದು, ಮಹಾನಗರಗಳಲ್ಲಿ 342 ಬಾಂಗ್ಲಾ ವಲಸಿಗರಿದ್ದಾರೆ. ಇಂತಹ ಅಕ್ರಮ ವಲಸಿಗರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಂಡಿದ್ದು ಪ್ರಕರಣ ಮುಕ್ತಾಯವಾದ ಬಳಿಕ ನ್ಯಾಯಾಲಯದ ಆದೇಶ ಪಡೆದು ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಅಗತ್ಯ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರಿಸಿ, ಅಕ್ರಮ ವಿದೇಶಿಯರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ನೆರವಾದವರ ವಿರುದ್ಧ ಬೆಂಗಳೂರು ನಗರದ ಬೆಳ್ಳಂದೂರು, ಕುಮಾರಸ್ವಾಮಿ ಲೇಔಟ್ ಮತ್ತು ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ತಲಾ 10ರಂತೆ ಒಟ್ಟು 3 ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ನ್ಯಾಯಾಲದಲ್ಲಿ ವಿಚಾರಣಾ ಹಂತದಲ್ಲಿವೆ. ಕಳೆದ ಹತ್ತು ವರ್ಷಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಒಟ್ಟು 658 ವಿದೇಶಿಯರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ವೀಸಾ ಮುಗಿದಿದ್ದರೂ ಸಹ ಅಕ್ರಮವಾಗಿ ವಾಸವಿರುವ ವಿದೇಶಿಯರನ್ನು ಪತ್ತೆಹಚ್ಚುವ ಬಗ್ಗೆ ಎಲ್ಲಾ ಘಟಕಾಧಿಕಾರಿಗಳಿಗೆ ತಿಳಿಸಲಾಗಿದ್ದು, ಅಂತವರು ಕಂಡುಬಂದಲ್ಲಿ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಠಾಣಾ ವ್ಯಾಪ್ತಿಯ ಬಾತ್ಮೀದಾರರ ಮೂಲಕ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಪತ್ತೆಯಾದ ಅನಧಿಕೃತ ವಿದೇಶಿಗರನ್ನು ನ್ಯಾಯಾಲಯದ ಮೇರೆಗೆ ದೇಶಕ್ಕೆ ಗಡಿಪಾರು ಮಾಡಲು ಕ್ರಮಕೈಗೊಳ್ಳಲಾಗಿರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.