ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್‌-19 ಸೋಂಕು ತಡೆಗಟ್ಟಲು ಸರ್ಕಾರದ ಆದೇಶ

ಬೆಂಗಳೂರು, ಏ.9, ಬಿಬಿಎಂಪಿ ಸೇರಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್‌-19 ಸೋಂಕು ಪರಿಣಾಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕ ಹೈಕೋರ್ಟ್‌ ಹಾಗೂ ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಸರ್ಕಾರ ಈ ಆದೇಶಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಆಯಾ ನಗರಗಳಲ್ಲಿ ಭೂ ವ್ಯವಹಾರಗಳಲ್ಲಿ ತೊಡಗಿರುವ ಸಂಘಗಳೊಂದಿಗೆ ಸಭೆಯನ್ನು ನಡೆಸಿ ಸಂಘಗಳ ನಿರ್ಮಾಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರಿಗೆ ವಸತಿ, ಆಹಾರ ಹಾಗೂ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನು ಈ ಸಂಘಗಳು ಕಲ್ಪಿಸಲು ಸೂಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು.
ರಾಜ್ಯದ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ವಲಸೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ನಗರ ಸ್ಥಳೀಯ ಸಂಸ್ಥೆಗಳು ಈ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಿಂದ ಕಾರ್ಮಿಕರ ಪಟ್ಟಿಯನ್ನು ಪಡೆದು ಅವರನ್ನು ಗುರುತಿಸಿ ಕಡ್ಡಾಯವಾಗಿ ಆಶ್ರಯ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಗರಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ಬೃಹತ್ ಕಾಮಗಾರಿಗಳ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ದೈನಂದಿನ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಗತಿಕರು, ಸ್ವಂತ ಊರಿಗೆ ಹಿಂದಿರುಗಲು ಸಾಧ್ಯವಾಗದೆ ಉಳಿದಿರುವಂತಹ ಹಾಗೂ ನಗರಗಳಲ್ಲಿರುವ ವಸತಿ ರಹಿತರನ್ನು ಸಹ ಗುರುತಿಸಿ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮವಹಿಸಬೇಕು.
ನಗರ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿ ಬರುವ ಶಾಲೆ ಅಥವಾ ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮವಹಿಸಬೇಕು. ಕಲ್ಪಿಸಲಾಗುವ ವಸತಿ ಕೇಂದ್ರಗಳಲ್ಲಿ ಈ ವಾಸಿಗಳು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವ ಕುರಿತು ಅಗತ್ಯ ಕ್ರಮವಹಿಸಬೇಕು
ಈ ಆಶ್ರಯ ಕೇಂದ್ರಗಳಲ್ಲಿ ಉಚಿತವಾಗಿ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯ ಇತರ ಮೂಲಭೂತ ಸೌಕರ್ಯ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮವಹಿಸಬೇಕು. ಆಶ್ರಯ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ, ಶೌಚಾಲಯಗಳನ್ನು ಒಳಗೊಂಡಂತೆ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡುವುದು, ಕೈತೊಳೆಯಲು ಸ್ಯಾನಿಟೈಸರ್‌, ಸಾಬೂನು, ಅಗತ್ಯವಿದ್ದಲ್ಲಿ ಮಾಸ್ಕ್‌ ವ್ಯವಸ್ಥೆಯನ್ನು ಕಲ್ಪಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ಆಶ್ರಯ ಕೇಂದ್ರದ ವಾಸಿಗಳಿಗೆ ಕೂಡಲೇ ಆರೋಗ್ಯ ತಪಾಸಣೆ ಒಳಪಡಿಸಬೇಕು, ಜಿಲ್ಲಾಡಳಿತ ವತಿಯಿಂದ ಆರೋಗ್ಯ ತಂಡಗಳು ನಿಯತವಾಗಿ ಈ ಕೇಂದ್ರಗಳಿಗೆ ಭೇಟಿ ನೀಡಿ ಅನಾರೋಗ್ಯ ನಿವಾಸಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಚಿಕಿತ್ಸೆಯನ್ನು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ನೀಡಲು ಕ್ರಮಕೈಗೊಳ್ಳಬೇಕು. ಎಲ್ಲಾ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳನ್ನು ಲಾಕ್‌ಡೌನ್‌ ಅವಧಿಯಲ್ಲಿಯೂ ಶೌಚಾಲಯ ಸೌಲಭ್ಯ ಇಲ್ಲಿದಿರುವ ಸಾರ್ವಜನಿಕರ ಉಪಯೋಗಕ್ಕಾಗಿ ಕಡ್ಡಾಯವಾಗಿ ತೆರೆದಿರಬೇಕು ಹಾಗೂ ಅವುಗಳನ್ನು ಶುಚಿಗೊಳಿಸಲು ಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಚಿತವಾಗಿ ನೀಡಿರುವ ಸೌಲಭ್ಯಗಳ ಬಗ್ಗೆ ಆಶ್ರಯ ಕೇಂದ್ರಗಳ ನಿವಾಸಿಗಳ ಮಾಹಿತಿಯೊಂದಿಗೆ ಪ್ರತಿ ದಿನ ದಾಖಲಾತಿಯನ್ನು ಛಾಯಾಚಿತ್ರಗಳನ್ನು ಒಳಗೊಂಡಂತೆ ನಿರ್ವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಆದೇಶದಲ್ಲಿ ತಿಳಿಸಿದ್ದಾರೆ.