ಮೈತ್ರಿ ಸರ್ಕಾರದ ಯೋಜನೆಗಳಿಗೆ ಸರ್ಕಾರ ತಡೆ: ಹಾಸನದಲ್ಲಿ ಜೆಡಿಎಸ್ ಪ್ರತಿಭಟನೆ

ಹಾಸನ, ಫೆ.  3 :     ಮೈತ್ರಿ ಸರ್ಕಾರದಲ್ಲಿ ಮಂಜೂರಾದ ಯೋಜನೆಗಳಿಗೆ ಕಾಮಗಾರಿ ಅನುದಾನಗಳಿಗೆ  ಬಿಜೆಪಿ ಸರ್ಕಾರ ತಡೆ ನೀಡಿರುವುದು ಸರಿಯಲ್ಲ. ಸರ್ಕಾರದ ದ್ವೇಷದ ರಾಜಕಾರಣ ವಿರೋಧಿಸಿ  ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷದ  ರಾಜಕಾರಣ ವಿರೋಧಿಸಿ ಮುಖ್ಯಮಂತ್ರಿ ಯಡಿಯೂರಪ್ಪಗೆ ತಮ್ಮನ್ನೂ ಸೇರಿದಂತೆ ಮಾಜಿ ಪ್ರಧಾನಿ  ಹೆಚ್.ಡಿ.ದೇವೇಗೌಡರು ಸಹ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ  ದ್ವೇಷದ ನಡೆ ವಿರೋಧಿಸಿ ಹಾಸನದಲ್ಲಿ ಮೊದಲು ಪ್ರತಿಭಟನೆ ಮಾಡಲಾಗುವುದು. ನಂತರ  ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ‌ ಮಾಡಲಾಗುವುದು ಎಂದು ಎಚ್ಚರಿಸಿದರು.

ಹಾಸನದ  ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಲು ಸೂಚಿಸಿದ್ದಾರೆ. ಹೊಳೆನರಸೀಪುರ  ಹಾಗೂ ಮೊಸಳೆಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜನ್ನು ಮುಚ್ಚಲು ಆದೇಶ  ಮಾಡಿದ್ದಾರೆ. ಮೂಲಸೌಕರ್ಯದ ನೆಪ ನೀಡಿ ಉನ್ನತ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ  30 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜನ್ನು ಮುಚ್ಚುವುದಕ್ಕೆ  ಸೂಚಿಸಿದ್ದಾರೆ.ಖಾಸಗಿಯವರಿಗೆ ಅನುಕೂಲ ಕಲ್ಪಿಸಲು ಹೀಗೆ ಮಾಡುತ್ತಿದ್ದಾರೆ ಎಂದು ರೇವಣ್ಣ  ಆರೋಪಿಸಿದರು.