ಬೆಂಗಳೂರು, ಫೆ.24, ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗಾದವಾದ ಅವಕಾಶ ಇದ್ದರೂ ಆ ಬಗ್ಗೆ ಯೋಚನೆ ಮಾಡದೆ ಕ್ಯಾಸಿನೊ ಮೂಲಕ ಜೂಜಾಟದ ದುರ್ವ್ಯಸನ ಬೆಳೆಸಲು ಹೊರಟಿರುವ ಬಿಜೆಪಿ ಸರ್ಕಾರ ಆರ್ಥಿಕತೆಯ ಜೊತೆಗೆ ಬೌದ್ಧಿಕವಾಗಿಯೂ ದಿವಾಳಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿರುವ ಸಿದ್ದರಾಮಯ್ಯ, ಭಾರತೀಯ ಸಂಸ್ಕೃತಿ-ಸಂಸ್ಕಾರ ರಕ್ಷಣೆಗಾಗಿಯೇ ಹುಟ್ಟಿದವರಂತೆ ಸಿ.ಟಿ.ರವಿ ಮಾತನಾಡುತ್ತಾರೆ. ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾತನಾಡುವ ಪ್ರವಾಸೋದ್ಯಮ ಸಚಿವರು ಜೂಜಾಟ ಯಾವ 'ಸಂಸ್ಕೃತಿ' ಎನ್ನುವುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರಗಳನ್ನು ಕುಟುಕಿರುವ ಸಿದ್ದರಾಮಯ್ಯ, ವಿಶ್ವ ಸಂಚಾರ ಮಾಡುತ್ತಿರುವ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿದೆಯೆನ್ನಲಾದ ಹಿಂದುಗಳ ಮೇಲಿನ ದೌರ್ಜನ್ಯದ ವಿಷಯವನ್ನು ಇಲ್ಲಿಯವರೆಗೆ ಏಕೆ ಎತ್ತಿಲ್ಲ ಎಂಬ ಪ್ರಶ್ನೆಯನ್ನು ಈಗ ಕೇಳಬೇಕಾಗಿದೆ.ಧಾರ್ಮಿಕ ದೌರ್ಜನ್ಯವನ್ನು ಪೂರ್ವಾಗ್ರಹದಿಂದ ಅಪವ್ಯಾಖ್ಯಾನ ಮಾಡಲಾಗಿದೆ.
ಪಾಕಿಸ್ತಾನದಲ್ಲಿರುವ ಅಹ್ಮದೀಯ ಮತ್ತು ಶಿಯಾ ಮುಸ್ಲಿಮರು, ಶ್ರೀಲಂಕಾದ ತಮಿಳರು, ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಪ್ರತಿ 2 ಗಂಟೆಗೊಂದರಂತೆ ದಲಿತ ವ್ಯಕ್ತಿಯ ಕೊಲೆಯಾಗುತ್ತಿದೆ, ಪ್ರತಿ 3 ಗಂಟೆಗೊಂದರಂತೆ ದಲಿತ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ದೇಶದ ದಲಿತರ ದುಸ್ಥಿತಿ-ದೌರ್ಜನ್ಯದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ, ಪಾಕಿಸ್ತಾನದ ದಲಿತರ ಬಗ್ಗೆ ಕಣ್ಣೀರು ಸುರಿಸುತ್ತಿರುವುದು ಬರೀ ನಾಟಕ ಎಂದು ಟೀಕಿಸಿದ್ದಾರೆ.ಪಾಕಿಸ್ತಾನದಲ್ಲಿರುವ ಎಲ್ಲ ಹಿಂದೂಗಳಿಗೆ ಪೌರತ್ವ ನೀಡಲಿ. ಅದರ ಜೊತೆ ಭಾರತದ ಜೊತೆ ಕರುಳುಬಳ್ಳಿಯ ಸಂಬಂಧ ಇರುವ ಮುಸ್ಲಿಂ ಸಮುದಾಯವರಿಗೂ ಪೌರತ್ವ ನೀಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.