ಧಾರವಾಡ 12: ಜಗತ್ತಿಗೆ ಆಧ್ಯಾತ್ಮವನ್ನು ಸಾರಿದವರು ಸ್ವಾಮಿ ವಿವೇಕಾನಂದರು, ಅವರು ಹೇಳಿದಂತೆ ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ ಎಂಬ ಮಾತು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಲವಡಿಕೊಳ್ಳಬೇಕಾದ ವಿಷಯ. ದಿನಕ್ಕೆ ಒಂದು ಬಾರಿಯಾದರೂ ನಾವು ನಮ್ಮೋಂದಿಗೆ ಮಾತನಾಡಿಕೊಳ್ಳಬೇಕು ಇದು ನಮ್ಮಲ್ಲಿರುವ ವ್ಯಕ್ತಿತ್ವ ನಮಗೆ ಅರ್ಥವಾಗಿಸುತ್ತದೆ. ನಮ್ಮಲ್ಲಿ ಅಪಾರವಾದ ಶಕ್ತಿ ಇದೆ. ನಮ್ಮ ಉತ್ತಮ ಆಲೋಚನೆಗಳು ನಮ್ಮ ವ್ಯಕ್ತಿತ್ವನ್ನು ರೂಪಿಸುತ್ತವೆ. ನಮ್ಮ ಯೋಚನೆಗಳ ಮೇಲೆ ನಾವು ನಿಗಾ ವಹಿಸಿದಾಗ ಮಾತ್ರ ನಮ್ಮ ಜೀವನವನ್ನು ನಾವು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳದರು.
ಅವರು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಎನ್.ಎಸ್.ಘಟಕ ಮತ್ತು ಜೆ.ಎಸ್.ಎಸ್ ಐ.ಟಿ.ಐ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನವನ್ನು ಶ್ರೀ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಇಚ್ಚಾ ಶಕ್ತಿ, ಧೃಡ ಸಂಕಲ್ಪ, ಛಲ ಇದ್ದರೆ ಮಾತ್ರ ನಮ್ಮ ಗುರಿಯನ್ನು ತಲುಪಸಲು ಸಾಧ್ಯ. ಏಕಾಗ್ರತೆ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಧೈರ್ಯ, ಅನಂತ ತಾಳ್ಮೆ ಬೇಕು ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು ಎಂಬು ವಿವೇಕಾನಂದರ ನಿಲುವಾಗಿತ್ತು. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುದು ವಿವೇಕಾನಂದರ ಪ್ರಮುಖ ಧ್ಯೇಯವಾಗಿತ್ತು. ರಾಷ್ಟ್ರೇ್ರಮ ನಮ್ಮನ್ನು ಮತ್ತು ದೇಶ ವಿಕಸಿತ ಮತ್ತು ವಿಶ್ವಗುರುವಾಗಬಲ್ಲದು ಎಂಬ ಎಲ್ಲ ವಿಚಾರಗಳ ಮೇಲೆ ವಿವೇಕಾನಂದರು ಯುವ ಜನಾಂಗಕ್ಕೆ ದಾರೀದೀಪವಾಗಿದ್ದರು ಹಾಗಾಗಿ ಅವರ ಜನ್ಮದಿನವನ್ನು ಯುವಕರ ದಿನ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಡಾ. ಜಿನದತ್ತ ಹಡಗಲಿಯವರು ಅತಿಥಿ ಉಪನ್ಯಾಸ ನೀಡುತ್ತ, ಸನ್ಯಾಸಿ ಎಂದರೆ ಸಮಾಜದ ಜನರಿಂದ ದೂರ ಇದ್ದು, ವೈರಾಗ್ಯದಿಂದ ಕಾಡು, ಗುಹೆಗಳಲ್ಲಿ ಏಕಾಂತ ವಾಸ ಮಾಡುತ್ತಾರೆ. ಧ್ಯಾನ, ತಪ ಜಪಗಳಲ್ಲಿ ಮುಳುಗಿ ಆತ್ಮ ಸಾಕ್ಷಾತ್ಕಾರದೊಳಗೆ ಸಾಗುವವರು ಎಂಬ ಕಲ್ಪನೆ ಇದೆ. ಆದರೆ, ಈ ಕಲ್ಪನೆಯನ್ನು ತೊಡೆದು ಹಾಕಿದ ವಿವೇಕಾನಂದರು ಆತ್ಮದ ಉದ್ಧಾರಕ್ಕಿಂತ ಹೆಚ್ಚಾಗಿ, ದೀನದಲಿತರ ಸೇವೆಯನ್ನು ಮಾಡುತ್ತ ಸರ್ವರ ಆತ್ಮೋಧ್ದಾರಕ್ಕಾಗಿ ಶ್ರಮವಿಸುವವರೇ ನಿಜವಾದ ಸನ್ಯಾಸಿ ಎಂದು ಸಾರಿದವರು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಪರೋಪಾಕಾರಾರ್ಥಂ ಮಿದಂ ಶರೀರಂ ಅನ್ನುವಂತೆಯೇ ಜನರ ಮಧ್ಯೆ ಇದ್ದು, ತ್ಯಾಗ, ವೈರಾಗ್ಯ ಭಾವನೆಗಳಿಂದ ಆಧ್ಯಾತ್ಮದ ಸಾಧನೆ ಮಾಡುತ್ತಾ ಜನರಲ್ಲಿ ಅವಿತುಕೊಂಡಿದ್ದ ಜಡತ್ವವನ್ನು ತೊಡೆದು ಹಾಕಿ. ತಮ್ಮ ಧೀರವಾಣಿಯಿಂದ ವಿಶ್ವದ ಜನರನ್ನು ಜಾಗೃತಿಗೊಳಿಸಿದ ಮಹಾನ್ ನಾಯಕ ಶ್ರೀ ಸ್ವಾಮಿ ವಿವೇಕಾನಂದರು.
ತಂದೆ ವಿಶ್ವನಾಥದತ್ತ ತಾಯಿ ಭುವನೇಶ್ವರಿ ದೇವಿಯ ಮಗನಾಗಿ ಹುಟ್ಟಿದ ನರೇಂದ್ರನೆಂಬ ಬಾಲಕ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಬಾಲ್ಯದಲ್ಲಿ ತುಂಟ ಹಾಗೂ ಧೈರ್ಯವಂತನಾಗಿದ್ದ ನರೇಂದ್ರ ಅಕ್ಕತಂಗಿಯಾರೊಂದಿಗೆ ತುಂಬಾ ಖುಷಿಯಾದ ಜೀವನವನ್ನು ಸಾಗಿಸಿದ್ದ. ನರೇಂದ್ರ ಬೆಳೆದು ವಿದ್ಯಾಭ್ಯಾಸ ಮಾಡಿ, ವಿದ್ಯಾ ಮಣಿಯಾದ, ಶ್ರೀ ಸ್ವಾಮಿ ವಿವೇಕಾನಂದನಾದ. ಲೋಕ ಕಲ್ಯಾಣಕಾರಕನಾದ, ನವಯುಗ ಪ್ರವರ್ತಕನಾದ, ಧರ್ಮ ಗುರುವಾದ, ಸರ್ವಧರ್ವ ಸಮನ್ವಯದ ಆಚಾರ್ಯನಾದ, ವಿಶ್ವವಿಖ್ಯಾತನಾದ, ಸರ್ವಜನ ವಂದಿತನಾದ ಭಾರತ ವರ್ಷದ ಚಿರಮಾನವ, ಚಿರನೂತನ ಪುರತ್ಥಾನಕ್ಕೆ ಕಾರಣರಾದ. ಸೂರ್ಯ ಚಂದ್ರರಿರುವವರೆಗೆ ಚಿರಸ್ಥಾಯಿಯಾದ. ಹರಮುನಿದರೂ ಗುರು ಕಾಯುತ್ತಾನೆ ಎಂಬ ವಾಕ್ಯದಂತೆ ಇಂತಹ ಮಹಾನ್ ಚೇತನರಿಗೆ ಗುರು ರಾಮಕೃಷ್ಣರ ಆಶೀರ್ವಾದ ದೊರೆತು ದೈವ ದರ್ಶನವಾಯಿತು. ಅವರ ಮನಸ್ಸು ಚಂಚಲವಾಗಲಿಲ್ಲ ಜೀವನದ ಅಗ್ನಿಕುಂಡದಲ್ಲಿ ಬೆಂದು ಬೆಂಡಾದರೂ ನಮ್ಮ ಒಳ್ಳೆಯತನವನ್ನು ನಾವು ಬಿಟ್ಟುಕೊಡಬಾರದು ಎಂಬುದಕ್ಕೆ ಸ್ವಾಮಿ ವಿವೇಕಾನಂದರು ಸಾಕ್ಷಿಯಾದವರು.
ಚಿಕ್ಯಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಇಡೀ ಜಗತ್ತನ್ನೆ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಭಾರತದ ಬಗ್ಗೆ ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ಎಂದು ರವೀಂದ್ರನಾಥ್ ಟ್ಯಾಗೋರ್ ಅಭಿಪ್ರಾಯ ಬರೆದಿದ್ದಾರೆ. ಗಾಂಧೀಜಿಯವರು ಸ್ವಾಮೀ ವಿವೇಕಾನಂದರ ವ್ಯಕ್ತಿತ್ವ ಹಾಗೂ ಅವರ ಕೃತಿಯನ್ನು ಓದಿದರೇ ರಾಷ್ಟ್ರೇ್ರಮ ಸಹಸ್ರಮಟ್ಟದಾಗುತ್ತದೆ ಎಂದು ಹೇಳಿದ್ದಾರೆ ಎಂದರು.
ಪ್ರಾರಂಭದಲ್ಲಿ ಕು. ಚಿನ್ಮಯಿ ಜಾಗಿರದಾರ ಪ್ರಾರ್ಥಿಸಿದರು. ಡಾ. ಆರ್.ವಿ ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ, ಭಲಭೀಮ ಹಾವನೂರ, ಮಂಜುನಾಥ ಪುಜಾರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.