ಉತ್ತಮ ಅಭ್ಯಾಸಗಳು ಬದುಕು ಸುಂದರವಾಗಿಸುತ್ತವೆ: ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ

ಉತ್ತಮ ಅಭ್ಯಾಸಗಳು ಬದುಕು ಸುಂದರವಾಗಿಸುತ್ತವೆ: ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ Good habits make life beautiful: Senior Civil Judge Doddamani

ಉತ್ತಮ ಅಭ್ಯಾಸಗಳು ಬದುಕು ಸುಂದರವಾಗಿಸುತ್ತವೆ: ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ 

ಧಾರವಾಡ ಆ 06: ಮನುಷ್ಯನಿಗೆ ತಗಲುವ ವಿವಿಧ ರೀತಿಯ ಹವ್ಯಾಸ, ಚಟಗಳು ವ್ಯಸನಗಳಾದಾಗ ವ್ಯಕ್ತಿಯ ಬದುಕು ಕಷ್ಟಕರವಾಗಿ, ನಡತೆಯಲ್ಲಿ ದೂಷಿಯಾಗುತ್ತಾನೆ. ವ್ಯಸನದಿಂದ ಮುಕ್ತವಾಗುವುದು ವ್ಯಕ್ತಿತ್ವದ ಪರಿವರ್ತನೆಯ ಮೊದಲ ಪ್ರಯತ್ನವಾಗಿದೆ. ಬದುಕಿನಲ್ಲಿ ಅಳವಡಿಸಿಕೊಳ್ಳುವ ಉತ್ತಮ ಅಭ್ಯಾಸಗಳು ಸುಂದರವಾಗಿಸುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ದೊಡ್ಡಮನಿ ಅವರು ಹೇಳಿದರು.  

ಅವರು ಇಂದು (ಜು.6) ಮಧ್ಯಾಹ್ನ ಧಾರವಾಡ ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಕೇಂದ್ರ ಕಾರಾಗೃಹ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಇಲಕಲ್ಲ ಡಾ. ಮಹಾಂತ ಅಪ್ಪಗಳ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಉದ್ಘಾಟಿಸಿ, ಮಾತನಾಡಿದರು.  

ಸಮಾಜದಲ್ಲಿ ಜನರು ಸಾಮಾಜಿಕವಾಗಿ, ಕೌಟುಂಬಿಕವಾಗಿ ನೆಮ್ಮದಿಯಿಂದ ಇರಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಮತ್ತು ದುಶ್ಚಟಗಳಿಗೆ ಬಲಿಯಾದವರು ಅದರಿಂದ ಹೊರಗಡೆ ಬಂದರೆ ಅದು ಸಾಧ್ಯವಾಗುತ್ತದೆ. ಒಂದು ಸಾರಿ ವ್ಯಸನಗಳನ್ನು ತ್ಯಜಿಸಿದ ನಂತರ ಮತ್ತೆ ಅದನ್ನು ಸೇವಿಸಿದರೆ ಡಾ.ಮಹಾಂತಪ್ಪನವರಿಗೆ ದ್ರೋಹ ಮಾಡಿದಂತೆ ಎಂದು ಅವರು ನುಡಿದರು.   

ವ್ಯಸನದಿಂದ ದೂರವಾದ ಮೇಲೆ ಮತ್ತೇ ಆ ಬಗ್ಗೆ ಯೋಚಿಸಬಾರದು. ವ್ಯಸನಿಗಳ ಸಹವಾಸದಿಂದ ದೂರವಿರಬೇಕು. ದುಶ್ಚಟಗಳಿಗೆ ಅಂಟಿಕೊಂಡರೆ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಂಡ ಹಾಗೆ, ಸಮಾಜದಲ್ಲಿ ಎಂದಿಗೂ ಮಾದಕ ವ್ಯಸನಿಗಳಿಗೆ ಮರ್ಯಾದೆ ಇರುವುದಿಲ್ಲ. ಎಚ್ಚರಿಕೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದು ಅವರು ಹೇಳಿದರು 

ಚಟಗಳನ್ನು ಮಾಡುವುದಕ್ಕೂ ಮುನ್ನ ಅದರಿಂದ ಯಾವ ರೀತಿ ಮನಸ್ಸಿನ ಮೇಲೆ, ದೇಹದ ಮೇಲೆ ಪರಿಣಾಮಗಳು ಬೀರುತ್ತವೆ ಎಂಬುದನ್ನು ಅರ್ಥೈಸಿಕೊಂಡು, ಹೆಜ್ಜೆ ಇಡಿ. ಮನ ಪರಿವರ್ತನೆ ಆಗುವಂತಹ ಒಳ್ಳೆಯ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು. 

ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿ, ನಿಮ್ಮಲ್ಲಿ ಅನೇಕರು ಇಂದು ಇಲ್ಲಿರಲು ವ್ಯಸನವೇ ಪರೋಕ್ಷವಾಗಿ ಅಥವಾ ನೇರವಾಗಿ ಕಾರಣವಾಗಿರಬಹುದು. ಆ ಒಂದು ಕ್ಷಣದ ತಪ್ಪು ನಿರ್ಧಾರ, ಸ್ನೇಹಿತರ ಒತ್ತಡ ಅಥವಾ ಮಾನಸಿಕ ಒತ್ತಡದಿಂದಾಗಿ ಶುರುವಾದ ಚಟ, ಇಂದು ನಿಮ್ಮ ಬದುಕನ್ನೇ ಕತ್ತಲಲ್ಲಿ ಮುಳುಗಿಸಿದೆ ಎಂದು ಅವರು ಹೇಳಿದರು. 

ವ್ಯಸನವೆಂಬುದು ಕೇವಲ ಒಂದು ಕೆಟ್ಟ ಚಟವಲ್ಲ. ಅದೊಂದು ಮಾರಣಾಂತಿಕ ಕಾಯಿಲೆ. ಅದು ಮೊದಲು ನಿಮ್ಮ ದೇಹವನ್ನು, ನಂತರ ನಿಮ್ಮ ಮನಸ್ಸನ್ನು, ಆ ಬಳಿಕ ನಿಮ್ಮ ಕುಟುಂಬವನ್ನು ಮತ್ತು ಕೊನೆಗೆ ನಿಮ್ಮ ಇಡೀ ಬದುಕನ್ನೇ ನಾಶಮಾಡುತ್ತದೆ ಎಂದು ಅವರು ತಿಳಿಸಿದರು. 

ಬದುಕಿಗೆ ನಮ್ಮ ಕುಟುಂಬಗಳೆ ಮೂಲ. ಕುಟುಂಬ ಸದಸ್ಯರ ಶ್ರಮ, ತ್ಯಾಗ ಮತ್ತು ಪ್ರೀತಿ ಪ್ರೋತ್ಸಾಹಗಳಿಂದ ಜೀವನದಲ್ಲಿ ಸಾಧನೆ ಮಾಡಲು ನಮಗೆ ಸಾಧ್ಯವಾಗುತ್ತದೆ. ವ್ಯಸನವು ಈ ಎಲ್ಲ ಅಂಶಗಳನ್ನು ಹಾಳಾ ಮಾಡಿ, ಬದುಕು ಬರಡಾಗುವಂತೆ ಮಾಡುತ್ತದೆ. ಮಾಡಿದ ತಪ್ಪನ್ನು, ವ್ಯಸನವನ್ನು ಮರೆತು ಮುಕ್ತರಾಗಿ ಬೆಳೆಯಬೇಕು. ಡಾ. ಮಹಾಂತಪ್ಪಗಳ ಆಶಯದಂತೆ ಶರಣರ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಮಹಾದೇವ ನಾಯ್ಕ ಅವರು ಮಾತನಾಡಿ, ಇಲಕಲ್ಲ ಡಾ. ಮಹಾಂತಪ್ಪಗಳ ಬದುಕಿನ ಪ್ರೇರಣೆ ಎಲ್ಲರಿಗೂ ಸಿಗಬೇಕು. ವ್ಯಸನಗಳ ಕಾರಣಗಳಿಂದಾಗಿ ಕಾರಾಗೃಹ ಸೇರಿರುವ ಮನಸ್ಸುಗಳಲ್ಲಿ ಬದಲಾವಣೆ ಆಗಬೇಕು. ಇಂದಿನಿಂದ ಎಲ್ಲ ಚಟ, ವ್ಯಸನಗಳಿಂದ ಮುಕ್ತರಾಗುತ್ತೇವೆ ಮತ್ತು ಉತ್ತಮ ಜೀವನ ರೂಪಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮಾದಕ ವಸ್ತು ಹಾಗೂ ವ್ಯಸನ ಮುಕ್ತತೆಯ ಉಪಾಯಗಳ ವಿಷಯದ ಕುರಿತು ಡಿಮ್ಹಾನ್ಸ್‌ನ ಮನೋವೈದ್ಯ ಡಾ.ಮಹೇಶ ಎಂ. ಅವರು ವಿಶೇಷ ಉಪನ್ಯಾಸ ನೀಡಿದರು.  

ಧಾರವಾಡ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ನಿರ್ಮಲ ಬಿ.ಆರ್‌. ಅವರು ಸ್ವಾಗತಿಸಿ, ಅತಿಥಿ ಪರಿಚಯಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್‌. ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಾಗೃಹದ ಶಿಕ್ಷಕ ಪಿ.ಬಿ.ಕುರುಬೆಟ್ಟ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಕಾರ್ಯಕ್ರಮದಲ್ಲಿ ಕಾರಾಗೃಹದ ಮನೋವೈದ್ಯ ಡಾ. ಲೋಕನಾಥ ಪುಠಾಣಿಕರ ಮತ್ತು ಜೈಲರ್‌ಗಳಾದ ಮಹಾದೇವಿ ಮರಕಟ್ಟಿ, ದೀಪಾ ರಾಮದುರ್ಗ, ಸುರೇಶ ಕರಗಾವಿ, ಚೇತನ ಕರೋಳಿ, ಸತೀಶ ವಡ್ಡರ ಸೇರಿದಂತೆ ಕೇಂದ್ರ ಕಾರಾಗೃಹದ ವಿವಿಧ ಸಿಬ್ಬಂದಿಗಳು, ಪುರುಷ ಮತ್ತು ಮಹಿಳಾ ಶಿಕ್ಷಾಬಂಧಿಗಳು ಉಪಸ್ಥಿತರಿದ್ದರು.