ಬೆಂಗಳೂರು,
ಡಿ.21 ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣಕ್ಕೆ ಮತ್ತು ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್
ಘಟನೆಗಳಿಗೆ ಜನತೆಯ ಆತಂಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಘೋರವಾಗಿ ವಿಫಲವಾದ ಕರ್ನಾಟಕ
ರಾಜ್ಯ ಸರಕಾರವೇ ನೇರ ಹೊಣೆಗಾರ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ
ಸಮಿತಿ ಆರೋಪಿಸಿದೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜು, ಕೂಡಲೇ
ಮಂಗಳೂರು ಗೋಲಿಬಾರ್ ಘಟನೆಯನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.ಕೇಂದ್ರ
ಸರಕಾರ ಸಂವಿಧಾನ ಹಾಗೂ ಜಾತ್ಯತೀತ ಪ್ರಜಾಪ್ರಭುತ್ವ ವಿರೋಧಿಯಾದ ಅಂಶಗಳನ್ನೊಳಗೊಂಡ ತಿದ್ದುಪಡಿಯನ್ನು
ಪೌರತ್ವ ಕಾಯ್ದೆಗೆ ತಂದಿರುವುದು ದೇಶದ ಎಲ್ಲಾ ಪ್ರಜಾಪ್ರಭುತ್ವ ವಾದಿಗಳಲ್ಲಿ ಆತಂಕ ಉಂಟುಮಾಡಿದೆ.
ಅದರ ಭಾಗವಾಗಿಯೇ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.ಕರ್ನಾಟಕ
ರಾಜ್ಯ ಸರಕಾರ ಜನತೆಯ ಆತಂಕ ನಿವಾರಣೆಗೆ ಕ್ರಮವಹಿಸುವ ಬದಲು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹ
ರೀತಿಯಲ್ಲಿ ಜನರ ಅಸಮಾಧಾನವನ್ನು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಹೊರಗೆಡಹಲು ಅವಕಾಶ
ನೀಡುವ ಬದಲು, ರಾಜ್ಯಾದ್ಯಂತ ನಿಷೇಧಾಜ್ಞೆ ಹೇರಿ ಪ್ರಜಾಪ್ರಭುತ್ವ ವಿರೋಧಿ ಕ್ರಮ ವಹಿಸಿದ್ದು ಮತ್ತಷ್ಟು
ವಾತಾವರಣವನ್ನು ಹದಗೆಡಿಸಿತು. ಇದರ ಪರಿಣಾಮವೇ ಗೋಲಿಬಾರ್ ಎಂದು ಅವರು ವಿಶ್ಲೇಷಿಸಿದ್ದಾರೆ.ರಾಜ್ಯ
ಹಾಗೂ ಮಂಗಳೂರಿನ ಜನತೆ ಸಂಯಮ ಕಾಯ್ದುಕೊಂಡು ಶಾಂತಿ ಕಾಪಾಡಬೇಕೆಂದು ಸಿಪಿಐಎಂ ಮನವಿ ಮಾಡುತ್ತದೆ.ಅದೇ
ಸಂದರ್ಭದಲ್ಲಿ ಗೋಲಿಬಾರ್ ನಲ್ಲಿ ಸತ್ತವರ ಕುಟುಂಬಕ್ಕೆ ತಲಾ 25 ಲಕ್ಷ ರೂಗಳ ಪರಿಹಾರ ಮತ್ತು ಗಾಯಗೊಂಡ ಎಲ್ಲರಿಗೂ ಸೂಕ್ತ
ವೈದ್ಯಕೀಯ ನೆರವು ಹಾಗೂ ಪರಿಹಾರವನ್ನು ರಾಜ್ಯ ಸರಕಾರ ನೀಡಬೆಕೆಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದು
ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.