ಗೋವಾ ಕುತಂತ್ರದಿಂದ ಮಹಾದಾಯಿಗೆ ಪ್ರವಾಹದ ಫಜಿತಿ : ರಾಜ್ಯ ಸರಕಾರದ ಮೌನಕ್ಕೆ ಜನರ ಹಿಡಿಶಾಪ

ಪಾರೇಶ ಭೋಸಲೆ

ಬೆಳಗಾವಿ : ಉತ್ತರ ಕರ್ನಾಟಕದ ಜೀವನಾಡಿ ಹಾಗೂ ಈ ಭಾಗದ 4 ಜಿಲ್ಲೆಗಳಿಗೆ ಜೀವನದಿ ಆಗಬೇಕಿದ್ದ ಮಹಾದಾಯಿಗೆ ಮತ್ತೊಂದು ಕಂಟಕ ಎದುರಾಗಿದ್ದು, ಪದೆ ಪದೆ ತಗಾದೆ ತೆಗೆಯುವ ಗೋವಾ ರಾಜ್ಯವು ಮತ್ತೆ ಮಹಾದಾಯಿ ನೀರಿಗಾಗಿ ಕುತಂತ್ರ ಮಾಡುತ್ತಿದೆ. ರಾಜ್ಯ ಸರಕಾರ ಇದರ ಬಗ್ಗೆ ಎಚ್ವೆತ್ತುಕೊಳ್ಳದಿದ್ದರೆ ಈ ಭಾಗಕ್ಕೆ ಮತ್ತೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವದು ಇಲ್ಲಿ ಸ್ಪಷ್ಟವಾಗುತ್ತಿದೆ.  

    ಹೌದು ಓದುಗರೇ ಉತ್ತರ ಕರ್ನಾಟಕದ 4 ಜಿಲ್ಲೆಗಳಾದ ಬೆಳಗಾವಿ, ಹುಬ್ಬಳಿ-ಧಾರವಾಡ, ಗದಗ, ಬಾಗಲಕೋಟೆ ಸೇರಿ ಒಟ್ಟು 13 ತಾಲೂಕಿನ ಕುಡಿಯುವ ನೀರಿನ ಭವನೆಯನ್ನು ನೀಗಿಸಬೇಕಿದ್ದ ಮಹದಾಯಿ ಯೋಜನೆ ಈಗ ಮತ್ತೆ ಗೋವಾ ರಾಜ್ಯದ ಕುತಂತ್ರದಿಂದ ಮತ್ತೆ ನೆನೆಗುದಿಗೆ ಬೀಳುವ ಎಲ್ಲ ಸನ್ನಿವೇಶಗಳು ಎದ್ದು ಕಾಣುತ್ತಿವೆ. ಕೇಂದ್ರದ ಮೇಲೆ ಒತ್ತಡ ಹಾಕುವ ಮೂಲಕ ಕೇಂದ್ರ ಸರಕಾರ ರಚನೆ ಮಾಡಿರುವ “ಪ್ರವಾಹ” ಸಂಸ್ಥೆಯು ಇಂದು ದಿ. 7ರಂದು ಖಾನಾಪೂರ ತಾಲೂಕಿನ ಮಹದಾಯಿ ಪ್ರದೇಶಕ್ಕೆ ಭೇಟಿ ನೀಡಲಿದೆ.

ಈ ಪ್ರವಾಹ ಸಂಸ್ಥೆಯ ಅಧ್ಯಕ್ಷರಾದ ಪಿ.ಎಮ್.ಸ್ಕಾಟ್ ಇವರು ಕೂಡಾ ಗೋವಾ ರಾಜ್ಯದ ಪಣಜಿ ನಿವಾಸಿಗಳಾಗಿದ್ದಾರೆ. ಇಂದು ದಿ.7ರಂದು ಈ ಪ್ರವಾಹ ಸಂಸ್ಥೆಯವರು ಮಹಾದಾಯಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಭೇಟಿಯ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಟ್ವಿಟ್ ಮಾಡುವ ಮೂಲಕ ಕರ್ನಾಟಕ ಸರಕಾರದ ಬಂಡವಾಳ ಬಿಚ್ವಿಡುವದಾಗಿ ಗೊಡ್ಡು ಬೆದರಿಕೆ ಹಾಕಿದ್ದಾರೆ.  

   ಇಷ್ಟೇಲ್ಲಾ ಘಟನಾವಳಿಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳದೆ ಇರುವದು ಉತ್ತರ ಕರ್ನಾಟಕದ ರೈತರಗೆ ಮತ್ತು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಮಹದಾಯಿ ವಿಷಯವಾಗಿ ತಲೆ ಕೆಡಿಸಿಕೊಳ್ಳದ ರಾಜ್ಯ ಸರಕಾರಕ್ಕೆ ಈ ಭಾಗದ ನಾಗರಿಕರು ಛೀಮಾರಿ ಹಾಕುವಂತಾಗಿದೆ.

  ಕ್ರಿಯಾ ಸಮಿತಿಯಿಂದ ಸರಕಾರಕ್ಕೆ ಪತ್ರ : ಗೋವಾ ಸರಕಾರ ಮಹಾದಾಯಿ ವಿಷಯದಲ್ಲಿ ಒಂದಿಲ್ಲ ಒಂದು ಕುತಂತ್ರ ನಡೆಸುತ್ತಿದ್ದು, ಈಗ ಕೇಂದ್ರದ ಮೇಲೆ ಒತ್ತಡ ಹಾಕುವ ಮೂಲಕ ಪ್ರವಾಹ ಸಂಸ್ಥೆಯನ್ನು ಮಹಾದಾಯಿ ಪ್ರದೇಶಕ್ಕೆ ಕರೆಸುವ ದುಸ್ಸಾಹಸ ಮಾಡಿದೆ. ಈ ವಿಷಯವನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡು ಮಹಾದಾಯಿ ಯೋಜನೆ ಬಗ್ಗೆ ಚಿಂತನೆ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಒತ್ತಾಯಿಸಿದ್ದಾರೆ.