ಮುಂಬೈ, ಜೂನ್ 29: ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆ ಮಾರಾಟ ಒತ್ತಡದಿಂದ ಮುಂಬೈಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟಿನಲ್ಲಿ 506 ಅಂಕ ಕುಸಿದು 34,665.55 ಕ್ಕೆ ಇಳಿದಿದೆ. ಭಾರತೀಯ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ ಎಂದು ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆಯ ವರದಿಯು ಸಹ ಹೂಡಿಕೆದಾರರ ಮನೋಭಾವವನ್ನು ಕುಗ್ಗಿಸಿದೆ. ಪ್ರಸಕ್ತ ಆರ್ಥಿಕ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ 5 ರಷ್ಟು ಕುಸಿಯುವ ಸಾಧ್ಯತೆ ಇದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 153 ಅಂಕ ಕುಸಿದು 10,230.85 ಕ್ಕೆ ಇಳಿದಿದೆ. ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 34,958.90 ಮತ್ತು 34,665ರಲ್ಲಿತ್ತು.ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 10,325.90 ಮತ್ತು 10,230.85ರಲ್ಲಿತ್ತು. ವಲಯ ಸೂಚ್ಯಂಕಗಳಾದ ಲೋಹ, ರಿಯಾಲ್ಟಿ, ಬ್ಯಾಂಕಿಂಗ್ ಮತ್ತು ಕೈಗಾರಿಕೆಗಳು ಹೆಚ್ಚಿನ ಕುಸಿತಕ್ಕೆ ಕಾರಣವಾಗಿವೆ. 30 ಕಂಪನೆನಿಗಳ ಷೇರುಗಳ ಪೈಕಿ 26 ಕುಸಿದಿದ್ದರೆ, 4 ಏರಿಕೆ ಕಂಡಿವೆ. ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ ತೀವ್ರ ನಷ್ಟ ಕಂಡಿವೆ.ಆದರೆ, ಐಟಿಸಿ, ನೆಸ್ಲೆ ಇಂಡಿಯಾ ಲಿಮಿಟೆಡ್, ಹಿಂದ್ ಯೂನಿಲಿವರ್, ಸನ್ ಫಾರ್ಮಾ ಉತ್ತಮ ಏರಿಕೆ ದಾಖಲಿಸಿವೆ. ಎಂಆರ್‌ಎಫ್, ಭಾರತ್ ಫೊರ್ಜ್, ಮತ್ತು ಜಿಎಂಆರ್ ಇನ್ಫ್ರಾ ಸೇರಿದಂತೆ ಒಟ್ಟು 586 ಕಂಪನಿಗಳು ಇಂದು ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿವೆ.