ಸ್ವಚ್ಛತೆಗೆ ಮಹತ್ವ ನೀಡಿ: ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ 01:  ಎಲ್ಲರೂ  ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕು. ಸ್ವಚ್ಛತೆಯನ್ನು ರೂಢಿಸಿಕೊಂಡು, ಪರಿಸರ ನೈರ್ಮಲ್ಯದೊಂದಿಗೆ ಆರೋಗ್ಯಯುತ ಬದುಕು ನಮ್ಮದಾಗಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು. 

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಮುನ್ನಾದಿನ ಜಿಲ್ಲಾಡಳಿತದಿಂದ ಹಮ್ಮಿಕೊಂಡ ಸ್ವಚ್ಚತಾ ಜಾಗೃತಿ ಅಭಿಯಾನ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ನಾವು ವಾಸಿಸುವ ಪರಿಸರವೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಆದ್ಯತೆ ನೀಡಬೇಕು. ಶಾಲಾಕಾಲೇಜಿನ ವಿದ್ಯಾರ್ಥಿಗಳ ಸ್ವಚ್ಚತೆಯ ಬಗ್ಗೆ ಒತ್ತು ನೀಡಿ ಜಾಗೃತಿ ಮೂಡಿಸಬೇಕು   ಎಂದು ಹೇಳಿದರು. 

ಸೈಕಲ್ ಜಾಥಾವು ನಗರದ ಸೈನಿಕ ಶಾಲೆಯ ಹತ್ತಿರದ ಲಾಲ್ ಬಹದ್ದೂರ ಶಾಸ್ತ್ರೀ ವೃತ್ತದಿಂದ ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತ ಹಾಗೂ ಗೊಳಗುಮ್ಮಟ ಮಾರ್ಗವಾಗಿ ಅಲ್ಲಾಪೂರ ಓಣಿಯವರೆಗೆ ನಡೆದು ಸಮಾಪ್ತಿಗೊಂಡು ಸ್ವಚ್ಛತಾ ಶ್ರಮದಾನ ಮಾಡಲಾಯಿತು. 

ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಶ್ರಮದಾನ: ಜಿಲ್ಲಾಧಿಕಾರಿ ಟಿ.ಭೂಬಾಲನ್, ಬಸ್ ನಿಲ್ದಾಣದ ಸ್ವಚ್ಚತಾ ಶ್ರಮದಾನದಲ್ಲಿ ಪಾಲ್ಗೊಂಡರು. ಅವರು, ಈ ಸಂದರ್ಭ ಕೇಂದ್ರ ಬಸ್ ನಿಲ್ದಾಣದ ಪರೀಶೀಲನೆ ನಡೆಸಿದರು. ಸಾರ್ವಜನಿಕರಿಗೆ ಸೂಕ್ತ ಮೂಲಭೂತ ಸೌಕರ್ಯ ವ್ಯವಸ್ಥೆಗಳಾದ ಕುಡಿಯುವ ನೀರು, ಶೌಚಾಲಯ ಕಲ್ಪಿಸಬೇಕು. ನಿಲ್ದಾಣದ ಸ್ವಚ್ಚತೆಗೆ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ನಿಲ್ದಾಣದ ಯಾತ್ರಿ ನಿವಾಸಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರೀಶೀಲಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಖಾದಿ ಗ್ರಾಮೋದ್ಯೋಗ ಇಲಾಖೆ, ಅಬಕಾರಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹಾಗೂ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಭೂದಾಖಲೆಗಳ ಇಲಾಖೆ, ಸಹಕಾರಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಕೋಶ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು.