ಗಜಲ್
ಹೇಗೆ ಬದುಕಲಿ ನಾನು ಹೂವಿನಲ್ಲೂ ಮದ್ದು ಗುಂಡು ಸಿಡಿಯುವಾಗ
ಹೇಗೆ ಸಾಯಲಿ ನಾನು ಮಸಣದಲ್ಲೂ ಗೋರಿಗಳು ದುಬಾರಿಯಾಗಿರುವಾಗ
ಏನು ಬರೆಯಲಿ ನಾನು ಧರ್ಮದ ಅಮಲಿಗೆ ನೆಲದ ನಡುಕ ಶುರುವಾಗಿರುವಾಗ
ಹೇಗೆ ಹೇಳಲಿ ನಾನು ಬೆಕ್ಕು ಇಲಿ ಹೆಗ್ಗಣ ತಿಂದು ಕಾಶಿ ಕಾಬಾ ಯಾತ್ರೆಗೆ ಹೋಗುವಾಗ
ಏನು ಹಾಡಲಿ ನಾನು ಕವಿ ಕಾವ್ಯ ಧರ್ಮ ರಾಜಕಾರಣ ಮಾಡುವಾಗ
ಹೇಗೆ ಪ್ರೀತಿಸಲಿ ನಾನು ಅವನ ನನ್ನ ನಡುವೆ ಕಟ್ಟುಪಾಡಿನ ಗೋಡೆ ಕಟ್ಟಿರುವಾಗ
ಏನು ಮಾಡಲಿ ನಾನು ಜಾತಿ ಧರ್ಮದ ದ್ವೇಷ ನೆರಳಾಗಿ ಕಾಡುವಾಗ
ಹೇಗೆ ಹೆಗಲು ಕೊಡಲಿ ನಾನು ಹೆಣದ ಹಣೆಯ ಮೇಲೆ ಧರ್ಮದ ಹೆಸರು ಗೀಚಿರುವಾಗ
ಏನು ಬೇಡಲಿ ನಾನು ಮನೆ ಮನೆಯಲ್ಲಿ ತಲ್ವಾರ್ ಮಸೆಯುವಾಗ
ಹೇಗೆ ಪಾಜಿ ಮುಟ್ಟಲಿ ನಾನು ಹಾದಿ ಬೀದಿಯಲಿ ‘ಗಿರಿರಾಜ’ನ ಸಾವು ಬೇಡುವಾಗ
- ಅಲ್ಲಾಗಿರಿರಾಜ್
ಕನಕಗಿರಿ
ಈಗಾಗಲೇ ‘ಕಾಡುವ ಕವಿತೆ’ಯ ಮೂಲಕ ಒಳ್ಳೆಯ ಕವಿತೆಗಳನ್ನು ಓದುಗರಿಗಾಗಿ ಒದಗಿಸುವ ಅದರ ಒಳನೋಟವನ್ನು ನನಗೆ ದಕ್ಕಿದ ರೀತಿ ತಿಳಿಯಪಡಿಸುವ ಕಾರ್ಯ ಮಾಡುತ್ತಿದ್ದೇನೆ. ಬಹಳಷ್ಟು ಓದುಗರು, ಗಜಲ್ ಬರಹಗಾರರು ಕವಿತೆಯ ಹಾಗೆ ಗಜಲ್‌ನ್ನು ಪರಿಚಯಿಸಿ ಎಂದು ಒತ್ತಾಯಿಸಿದ ಕಾರಣಕ್ಕೆ ‘ಗಜಲ್ ಗಮಲು’ ಎಂಬ ಅಂಕಣದ ಮೂಲಕ ನನಗೆ ಇಷ್ಟವಾಗುವ ಗಜಲ್‌ನ್ನು ಓದುಗರೆದುರು ತೆರೆದಿಡುತ್ತಿದ್ದೇನೆ. ಇಲ್ಲಿಯವರೆಗೂ ಓದುಗ ದೊರೆಗಳು ಪ್ರತಿ ಬರಹಗಳನ್ನು ಅಪ್ಪಿಕೊಂಡು ಪ್ರೋತ್ಸಾಹಿಸಿದ್ದಾರೆ. ಈ ಅಂಕಣಕ್ಕೂ ನಿಮ್ಮ ಬೆಂಬಲ ಇರಲಿ ಎಂದು ವಿನಮ್ರನಾಗಿ ಬೇಡಿಕೊಳ್ಳುವೆ.
ನನ್ನೊಳಗೆ ನಾನೇ ಕಂಡುಕೊಂಡ ಹಾಗೆ ಗಜಸಿಲ್ ಎಂದರೆ ಮನಸು-ಮನಸುಗಳನ್ನು ಬೆಸೆಯುವ ಒಂದು ಮಾಂತ್ರಿಕ ಶಕ್ತಿ. ನೋವಿನ ಕಡಲಲ್ಲಿ ಮುಳುಗೇಳುವ ಬದುಕನ್ನು ದಡ ಸೇರಿಸುವ ಸುಖದ ಹಾಯಿದೋಣಿ. ಎದೆ ಜುಮ್ಮೆನ್ನಿಸುವಷ್ಟು ನಾದದ ಲಯದಲ್ಲಿ ಹಿಡಿದಿಡುವ ತೀವ್ರತೆಯ ಭಾವತರಂಗ. ನಶ್ವರತೆಯ ಅರಿವು ಮೂಡಿಸಿ ಸತ್ಯವನ್ನು ಸಾಕ್ಷಾತ್ಕಾರಗೊಳಿಸುವ ಭಗವದ್ಗೀತೆ. ಮಧುಬಟ್ಟಲಲ್ಲಿ ಮುಳುಗೇಳಿಸುತ್ತ ಸಮತೆಯ ತೋಳ ತೆಕ್ಕೆಯಲ್ಲಿ ಬಿಗಿದಪ್ಪುವ ಸಾಕಿಯ ಅಂತಃಕರಣ. ಧರ್ಮಗಳ ಹಂಗು ಹರಿದು ಸರ್ವರನು ಮನುಷ್ಯರನ್ನಾಗಿಸುವ ಪ್ರೇಮಗೀತೆ. ಕರುಣೆ, ಸ್ನೇಹ, ಸಹಾಯ, ಅನುಕಂಪಗಳಲ್ಲಿಯೇ ದೇವರನ್ನು ಕಾಣಿಸುವ ಈ ನೆಲದ ತಾಯಿ ಬೇರು. ಇನ್ನುಳಿದಂತೆ ಹೆಸರಾಂತ ಗಜಸಿಲ್‌ಕಾರರೆಲ್ಲ ಬಣ್ಣಿಸುವ ಹಾಗೆ, ಗಜಸಿಲ್ ಎಂದರೆ ಹೃದಯ ವೃತ್ತಾಂತ ಮತ್ತು ಪ್ರೇಮ-ಮೋಹದ ವಿದ್ಯಮಾನಗಳ ಹೇಳಿಕೆ. ಆತ್ಮಸಖಿಯೊಡನೆ ಸಖ ನಡೆಸುವ ಆಪ್ತ ಸಂವಾದ. ಅದರ ಲಯಬದ್ಧತೆ, ನಿಯಮಗಳ ಕಟ್ಟುಪಾಡು, ಪದಗಳ ಲಾಲಿತ್ಯ ಎಲ್ಲವುಗಳಿಂದಲೂ ಓದುಗರನ್ನು ಸುಲಭವಾಗಿ ಸೆಳೆದುಕೊಳ್ಳುವ ತಾಕತ್ತನ್ನು ಗಜಸಿಲ್ ಹೊಂದಿದೆ. ಹಾಗೆಂದೇ ಶಾಂತರಸರಿಂದ ಸಣ್ಣಗೆ ಶುರುವಾದ ಗಜಸಿಲ್ ತೊರೆ ಇಂದು ನದಿಯಾಗಿ ಧುಮ್ಮಿಕ್ಕುತ್ತ, ಸಾಗರದಂತೆ ಕಂಗೊಳಿಸುವ ಮಟ್ಟಕ್ಕೆ ಬೆಳೆದಿದೆ.
ಕನ್ನಡದಲ್ಲಿ ಗಜಲ್ ಕಾವ್ಯಕೃಷಿ ವಿಫುಲ ಪ್ರಮಾಣದಲ್ಲಿ ಪ್ರವರ್ಧಮಾನದತ್ತ ಸಾಗುತ್ತಿದೆಯೆಂಬುದಕ್ಕೆ ಸಾಲು ಸಾಲಾಗಿ ಪ್ರಕಟಗೊಳ್ಳುತ್ತಿರುವ ಗಜಲ್ ಸಂಕಲನಗಳನ್ನು ಸಾಕ್ಷೀಕರಿಸಬಹುದು. ಅಷ್ಟು ಸುಲಭಕ್ಕೆ ಒಬ್ಬ ಬರಹಗಾರನಿಗೆ ಗಜಲ್ ಪ್ರಕಾರ ದಕ್ಕುವುದಿಲ್ಲ. ಕವಿತೆ ಬರೆಯುವಷ್ಟು ಸುಲಭವಾಗಿ, ಸ್ವಚ್ಛಂದವಾಗಿ ಗಜಲ್ ಬರೆಯಲಾಗುವುದಿಲ್ಲ. ಗಂಭೀರ ಅಧ್ಯಯನ, ದಟ್ಟ ಅನುಭವ, ಧ್ಯಾನಿಸುವ ಉತ್ಕಟತೆ, ಜೀವದಂತೆ ಬಿಗಿದಪ್ಪುವ ಒಲವು, ಜನಸಾಮಾನ್ಯನ ಎದೆಗೂ ಮುಟ್ಟಿಸಬೇಕೆನ್ನುವ ತುಡಿತ ಇದ್ದರೆ ಮಾತ್ರ ಗಜಲ್ ಕರಗತವಾಗುತ್ತದೆ.
ನಮ್ಮ ನಡುವಿನ ಬಹುಮುಖ್ಯ ಗಜಲ್ ಕವಿಗಳ ಸಾಲಿನಲ್ಲಿ ಕಂಡು ಬರುವ ಪ್ರಮುಖರೆಂದರೆ ಕನಕಗಿರಿಯ ಅಲ್ಲಾಗಿರಿರಾಜ್. ಇವರು ಒಬ್ಬ ಕವಿಯಾಗಿ, ಗಜಲ್‌ಕಾರರಾಗಿ ನನಗೆ ಕಾಣಿಸಿಕೊಳ್ಳುವುದಕ್ಕಿಂತ ಒಬ್ಬ ಮನುಷ್ಯಪ್ರೀತಿಯ, ಸರ್ವಜನಾಂಗದ ಸಮತೆಯ ಆಶಯ ಹೊಂದಿದ ಅಪ್ಪಟ ಮಾನವೀಯ ಕಳಕಳಿಯ ವ್ಯಕ್ತಿಯಾಗಿ ಕಾಣಸಿಗುತ್ತಾರೆ. ಜೀವದುಸಿರಿನಂತೆ, ಧ್ಯಾನದಂತೆ ಗಜಲ್‌ಗಳನ್ನು ಆರಾಧಿಸುತ್ತಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅಲ್ಲಾಗಿರಿರಾಜ್ ಕೊಪ್ಪಳದ ಕನಕಗಿರಿಯಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಚಟುವಟಿಕೆ, ಪ್ರಗತಿಪರ ಸಂಘಟನೆಗಳಲ್ಲಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇವರು ಇಡೀ ಭಾರತದ ತುಂಬ ಅಲೆಮಾರಿ ಫಕೀರನಂತೆ ತಿರುಗಾಡಿದವರು. ತಳ ಸಮುದಾಯಗಳ ಬದುಕಿನ ಹಕ್ಕಿಗಾಗಿ ಸಂಘಟಿತ ಹೋರಾಟ ಮಾಡುವುದರ ಮೂಲಕ ಗುರುತಿಸಿಕೊಂಡಿದ್ದಾರೆ. ‘ನೂರ್ ಗಜಲ್’ ಗಿರಿರಾಜ್ ಅವರ ಮೊದಲ ಗಜಲ್ ಸಂಕಲನ. ಸಾಕಷ್ಟು ಬಾರಿ ಮುದ್ರಣಗೊಂಡ ಈ ಸಂಕಲನ ಗಜಲ್ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಲ್ಲದೆ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುವುದರ ಮೂಲಕ ಕನ್ನಡ ಗಜಲ್ ಸಾಹಿತ್ಯದಲ್ಲಿ ವಿಶೇಷ ಮತ್ತು ವಿಶಿಷ್ಟ ಇತಿಹಾಸ ನಿರ್ಮಿಸಿದೆ. ‘ಫಕೀರ್ ಗಜಲ್’, ಆಜಾದಿ ಗಜಲ್’, ‘ಸುರೂರ್ ಗಜಲ್’, ‘99 ಗಜಲ್’ ಸೇರಿದಂತೆ 17ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ನೂರಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದಿರುವ ಅಲ್ಲಾಗಿರಿರಾಜ್, ನಾಡಿನಾದ್ಯಂತ ಗಜಲ್ ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ‘ಸಮೀರ್ ಪ್ರಕಾಶನ ಕನಕಗಿರಿ’ ಮೂಲಕ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿವರ್ಷ ‘ಗಾಲಿಬ್ ನೆನಪು’ ಕಾರ್ಯಕ್ರಮ ಆಯೋಜನೆ ಮಾಡುವುದರ ಮೂಲಕ ಯುವ ಗಜಲ್ ಬರಹಗಾರರಿಗೆ ವೇದಿಕೆ ಒದಗಿಸುತ್ತಿದ್ದಾರೆ. ಗಿರಿರಾಜ್ ಅವರ ಗಜಲ್‌ಗಳನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿದೆ. ಅವರು ಬರೆದ ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ.
ಸರ್ವಜನಾಂಗದ ತೋಟವಾದ ಈ ಪುಣ್ಯಭೂಮಿಯಲ್ಲಿ ಅನೇಕ ದ್ವಂದ್ವಗಳು, ವಿಪರ್ಯಾಸಗಳು ನಡೆದು ಬದುಕನ್ನು ಬಲು ದುಸ್ತರಗೊಳಿಸಿವೆ. ‘ಮಾನವ ಕುಲಂ ತಾನೊಂದೇ ವಲಂ’, ‘ಸಬ್ ಕಾ ಮಾಲೀಕ್ ಏಕ್ ಹೈ’, ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ಮಹಾತ್ಮರ ಹೇಳಿಕೆಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ಪ್ರಕ್ಷುಬ್ಧ ಸ್ಥಿತಿಯಲ್ಲಿ ನೆಮ್ಮದಿ, ಶಾಂತಿ, ಸೌಹಾರ್ದತೆ ಸ್ಥಾಪಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಮನುಷ್ಯನೇ ಮನುಷ್ಯನ ಶತ್ರುವಾಗಿ ದೇವರು, ಧರ್ಮದ ಹೆಸರಲ್ಲಿ ಮನಸುಗಳ ಮಧ್ಯೆ ಅಡ್ಡಗೋಡೆಯನ್ನೆಬ್ಬಿಸುತ್ತಿದ್ದಾನೆ. ಇಂತಹ ವಿಷಮ ಸನ್ನಿವೇಶದಲ್ಲಿ ಹುಟ್ಟಿಕೊಂಡಿರುವ ಅಲ್ಲಾಗಿರಿರಾಜ್ ಅವರ ಈ ಗಜಲ್ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತದೆ. ‘ದೇವರಾಗುವುದು ಯಾರಿಗೆ ಬೇಕು? ಮನುಷ್ಯನಾದರೆ ಸಾಕು’ ಎಂಬ ಪರಿಕಲ್ಪನೆಯನ್ನು ಈ ನೆಲದ ಪ್ರತಿ ಮನುಜನಿಗೂ ಅರ್ಥೈಸುವ ಈ ಗಜಲ್ ಇಷ್ಟವಾಗುತ್ತದೆ.
ಬದುಕು ಮತ್ತು ಸಾವು ಎರಡೂ ಗೌಣವಾಗಿರುವ ಸಂದರ್ಭವಿದು. ಹೂವೆಂದುಕೊಂಡಿದ್ದೇ ಹಾವಾಗಿ ಕಚ್ಚುವ ಅಪನಂಬುಗೆಯ ಕಾಲ. ಸಾವಿನ ನಂತರವೂ ಮನುಷ್ಯತ್ವ ಮರೆತು ಹಣಕ್ಕಾಗಿ ಚೌಕಾಸಿ ಮಾಡುವ ಕಾಲ. ಹಾಗೆಂದೇ ಕವಿ, ಮದ್ದು ಗುಂಡುಗಳು ಹೂವಿನಲ್ಲಿ ಅಡಗಿರುವಾಗ, ಮಸಣದಲ್ಲಿ ಗೋರಿಗಳು ದುಬಾರಿಯಾಗಿರುವಾಗ ಬದುಕು ಮತ್ತು ಸಾವು ತೀರಾ ಕಷ್ಟವಾಗಿವೆ ಎನ್ನುತ್ತಾನೆ. ಧರ್ಮದ ನಶೆ ಈ ನೆಲದ ಕಂಪನಕ್ಕೆ ಕಾರಣವಾಗಿದೆ. ಗೋಮುಖವ್ಯಾಘ್ರಗಳು ಸಾಧುಗಳಂತೆ ಸೋಗು ಹಾಕಿ ಅಮಾಯಕರನ್ನು ಶೋಷಿಸುತ್ತಿವೆ. ಕವಿಕಾವ್ಯವೂ ರಾಜಕಾರಣದ ನೆರಳಿಗೆ ಒಳಗಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿದೆ. ಧರ್ಮದ ನೆಪದಲ್ಲಿ ಗೋಡೆಗಳನ್ನೆಬ್ಬಿಸಿ ಮೆರೆಯುವ ದಿನಮಾನದಲ್ಲಿ ಪ್ರೀತಿಸುವುದಾದರೂ ಹೇಗೆ? ಹೆಣದ ಹಣೆಯ ಮೇಲೂ ಧರ್ಮದ ಹೆಸರು ಲೇಪಿಸಿರುವಾಗ ಹೆಗಲು ಕೊಡುವುದು ದುಸ್ತರವಾಗಿದೆ. ಎಲ್ಲ ಕಡೆಯೂ ಶಸ್ತ್ರಗಳು ರಾರಾಜಿಸಿ ಸಾವನ್ನೇ ಬೇಡುವಾಗ ಈ ನೆಲದ ಮೇಲೆ ಸೌಹಾರ್ದತೆಯ ಕನಸನ್ನು ಸಾಕಾರಗೊಳಿಸುವುದು ಹೇಗೆ? ಎನ್ನುತ್ತಾರೆ ಗಜಲ್ ಕವಿ ಅಲ್ಲಾಗಿರಿರಾಜ್.
ಈ ಕ್ಷಣಕ್ಕೆ ನಮ್ಮನ್ನೆಲ್ಲ ಕಾಡುವಂತಹ ಪ್ರಶ್ನೆಗಳನ್ನು ತಮ್ಮ ಗಜಲ್ ಮೂಲಕ ಎತ್ತುತ್ತಲೇ ಸಮಸಮಾಜದ, ಮನುಷ್ಯಪ್ರೀತಿಯ ಉತ್ತರವನ್ನು ಬಯಸುವ ಗಿರಿರಾಜ್ ಅವರಿಗೆ ಧನ್ಯವಾದಗಳು.
- * * * -