ಅಭಿವೃದ್ದಿ ಯೋಜನೆ, ಸಮಸ್ಯೆ ಹಾಗೂ ಯೋಜನೆಗಳಿಗೆ ಅವಶ್ಯ ಅನುದಾನ ಮಂಜೂರು ಮೀಸಲಿಡುವ ಕುರಿತು ಸಾಮಾನ್ಯ ಸಭೆ

ಅಭಿವೃದ್ದಿ ಯೋಜನೆ, ಸಮಸ್ಯೆ ಹಾಗೂ ಯೋಜನೆಗಳಿಗೆ ಅವಶ್ಯ ಅನುದಾನ ಮಂಜೂರು ಮೀಸಲಿಡುವ ಕುರಿತು ಸಾಮಾನ್ಯ ಸಭೆ General meeting on allocating necessary funds for development plans, problems and projects

ದೇವರಹಿಪ್ಪರಗಿ 05: ಪಟ್ಟಣದ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಬೋರಮ್ಮ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಹಾಗೂ ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ ಅವರ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು. 

ಪಟ್ಟಣದ ಅಭಿವೃದ್ದಿ ಯೋಜನೆ, ಇರುವ ಸಮಸ್ಯೆ ಹಾಗೂ ಯೋಜನೆಗಳಿಗೆ ಅವಶ್ಯ ಅನುದಾನ ಮಂಜೂರು ಮತ್ತು ಮೀಸಲಿಡುವ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಚರ್ಚಿಸಿದರು. ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳಾದ ಪ.ಪಂ ಕಾರ್ಯಾಲಯದಿಂದ ಮೊಹರೆ ವೃತ್ತದ ವರೆಗೆ ಫುಟ್ ಪಾತ್ ಮೇಲೆ ಅತಿಕ್ರಮಣವಾಗಿ ಇರುವ ಅಂಗಡಿಗಳ ತೆರವು, ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡಿಗೆ ಹೊಂದಿಕೊಂಡ ಅತಿಕ್ರಮಣ ಅಂಗಡಿಗಳ ತೆರವು,ಮೊಹರೆ ವೃತ್ತದ ಬಳಿ ಇರುವ ಶಾಹಪೂರ ಹಾಗೂ ದಿಡ್ಡಿಮನಿ ಅವರ ಆಸ್ತಿ ಹದ್ದು ಬಸ್ತಿ ಮಾಡುವ ಕುರಿತು,ವಾರ್ಡ ನಂ.08ರ ಸ್ಮಶಾನ ರಸ್ತೆಯ ಗಟಾರ ನಿರ್ಮಿಸುವ ಕುರಿತು, ಪೌರಕಾರ್ಮಿಕರಿಗೆ ಸಮವಸ್ತ್ರ ನೀಡಲು ಟೆಂಡರ್ ಕರಿಯುವ ಕುರಿತು,ಪ.ಪಂ ಮಾಲೀಕತ್ವದ ಘನ ತ್ಯಾಜ್ಯ ವಾಹನಗಳ ರಿಪೇರಿ ಕುರಿತು, ಪಟ್ಟಣದ ವಿವಿಧ ವಾರ್ಡುಗಳಲ್ಲಿ ಹೈ- ಮಾಸ್ಕ್‌ ಲೈಟ್ ಅಳವಡಿಸುವ ಕುರಿತು, ಖರೀದಿ ಪತ್ರದ ಕಿಮ್ಮತ್ತಿನ ಶೇ.01 ಇರುವುದನ್ನು ಶೇ.02ರಷ್ಟು ಮೊತ್ತವನ್ನು ಹೆಚ್ಚಿಸುವ ಕುರಿತು ಮಂಡನೆಯಾಗಿ ಮಂಜೂರು ಮಾಡಬೇಕಾದ ಸಾರ್ವಜನಿಕ ಕೆಲಸಗಳ ಪಟ್ಟಿಗಳ ಬಗ್ಗೆ ಸರ್ವ ಸದಸ್ಯರ ಜೊತೆ ಕುಲಂಕುಷ ಚರ್ಚೆ ನಡೆಸಿದರು.ಸದಸ್ಯರಾದ ಬಶೀರಅಹ್ಮದ್‌. ಬೇಪಾರಿ ಅವರು ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿ ಇರುವ ಅತಿಕ್ರಮಣ ಅಂಗಡಿಗಳ ಹಾಗೂ ಮೊಹರೆ ವೃತ್ತದ ಖಾಸಗಿಯವರ ಜಾಗದ ಹದ್ದುಬಸ್ತಿಯ ಕುರಿತು ಸದನದ ಗಮನ ಸೆಳೆದರು. ಸದಸ್ಯರಾದ ಕಾಸಪ್ಪ ಜಮಾದಾರ ಅವರು ಕುಡಿಯುವ ನೀರಿನ ಕಾಮಗಾರಿಯ ಬಗ್ಗೆ ಮಾತನಾಡಿದರು.ಪಟ್ಟಣದ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡಲು ಟೆಂಡರ್ ಕುರಿತು ಚರ್ಚೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಅವರು ಶೌಚಾಲಯಗಳ ನಿರ್ವಹಣೆ ಸರಿಯಾಗಿ ನೋಡಿಕೊಂಡು ಹೋಗುವವರು ಇದ್ದರೆ ಅವರ ಜೊತೆ ಅಗ್ರಿಮೆಂಟ್ ಮಾಡಿಕೊಂಡು ಆದಾಯಕ್ಕಿಂತ ನಿರ್ವಹಣೆಗೆ ಹೆಚ್ಚಿನ ಮಹತ್ವ ಕೊಡೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ (ಜಲಕತ್ತಿ),ಬಸೀರ ಅಹ್ಮದ್ ಬೇಪಾರಿ, ಕಾಸಪ್ಪ ಜಮಾದಾರ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ,ಸಿಂಧೂರ ಡಾಲೇರ, ಮಂಗಳೇಶ್ವರ ಕಡ್ಲೇವಾಡ, ರತ್ನವ್ವ ದೇವೂರ, ಶೋಭಾ ಮಲ್ಹಾರಿ, ದಾನಾಬಾಯಿ ಚವ್ಹಾಣ, ಅರಿಫಾಬೇಗಂ ಬಾಗವಾನ, ಸಲೀಮಾ ಮಣೂರ, ನಾಮನಿರ್ದೇಶಿತ ಸದಸ್ಯರುಗಳಾದ ರಾಜು ಮೇಟಗಾರ,ಸುನೀಲ ಕನಮಡಿ, ಹುಸೇನ ಕೊಕಟನೂರ, ಕಿರಿಯ ಅಭಿಯಂತರರಾದ ಗುರುರಾಜ ಬಿರಾದಾರ, ಸೋಮಶೇಖರ ಭೋವಿ, ಪ್ರವೀಣ ಹಿರೇಮಠ, ನಿಂಗಪ್ಪ ಸುಂಗಠಾಣ, ಎಸ್‌.ಎಸ್‌.ಪೂಜಾರಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.