ಕಾಶಿ ಮಾದರಿಯಲ್ಲಿ ಹಿರಣ್ಯಕೇಶಿ ನದಿಗೆ ಗಂಗಾರತಿ ಹಿರಣ್ಯಕೇಶಿ ನದಿಯಲ್ಲಿ ದೊರೆತ ಹೊಳೆಮ್ಮದೇವಿ ಮೂರ್ತಿ

ಕಾಶಿ ಮಾದರಿಯಲ್ಲಿ ಹಿರಣ್ಯಕೇಶಿ ನದಿಗೆ ಗಂಗಾರತಿ ಹಿರಣ್ಯಕೇಶಿ ನದಿಯಲ್ಲಿ ದೊರೆತ ಹೊಳೆಮ್ಮದೇವಿ ಮೂರ್ತಿ Gangarathi idol found in Hiranyakeshi river, modeled after Kashi

ಮೊನ್ನೆ ಭಾನುವಾರ ಮಂಜಕ್ಕ ಅವರ ಮಗಳ ಮದುವೆ ಹುಕ್ಕೇರಿ ಹತ್ತಿರವಿರುವ ಬಡಕುಂದ್ರಿಯಲ್ಲಿತ್ತು. ಮದುವೆಗೆ ತಪ್ಪದೇ ಬರಬೇಕು ಎಂದು ಅಕ್ಕ ಒಂದು ತಿಂಗಳಿನಿಂದ ಆಹ್ವಾನಿಸುತ್ತಿದ್ದಳು. ಅಂದು ಯಾವುದೇ ಕೆಲಸಗಳು ಇರದೇ ಇದ್ದರೆ ಖಂಡಿತವಾಗಿ ಬರುತ್ತೇನೆ ಎಂದು ಅವರಿಗೆ ಆಶ್ವಾಸನೆ ನೀಡಿದ್ದೆ. ಅದರಂತೆ ಭಾನುವಾರ ಯಾವುದೇ ಕೆಲಸಗಳು ಇರಲಿಲ್ಲ. ಮದುವೆಗೆ ಹೊರಡಲು ತೀರ್ಮಾನಿಸಿದೆ. 

ಬೆಳಿಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡೆ. ನಂತರ ಮನೆಗೆಲಸಗಳನ್ನು ತರಾತುರಿಯಲ್ಲಿ ಮಾಡಿ ಮುಗಿಸಿದೆ. ಚಳಿ ಇದ್ದಿದ್ದರಿಂದ ಬಿಸಿ ನೀರಿನಲ್ಲಿ ಸ್ನಾನ ಮಾಡಿದೆ. ಬಳಿಕ ಉಪಹಾರ ಸೇವಿಸಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಮದುಗೆ ಹೊರಡಲು ಅಣಿಯಾದೆ. ಮನೆಯಿಂದ ಹೊರಗಡೆ ಬಂದು ವೀಕ್ಷಿಸಿದಾಗ ಜನರು ಅವಸರದಲ್ಲಿ ಓಡಾಡುತ್ತಿದ್ದದ್ದನ್ನು ಗಮನಿಸಿದೆ. ಊರಿನ ಜನರು ಮದುವೆಗೆ ಹೊರಡಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಸ್ ನಲ್ಲಿ ಕುಳಿತುಕೊಳ್ಳಲು ಜಾಗ ದೊರೆಯಲಿದೆ. ಬಸ್ ನಲ್ಲಿ ನಿಂತುಕೊಂಡೆ ಸ್ವಲ್ಪ ದೂರ ಕ್ರಮಿಸಿದೆವು. ಬಳಿಕ ಮತ್ತೊಂದು ವಾಹನದ ವ್ಯವಸ್ಥೆ ಮಾಡಿಯಾಗಿತ್ತೂ, ಅದರಲ್ಲಿ ನಾನು ಸಹಿತ ಕೆಲವು ಜನರು ಹುಕ್ಕೇರಿ ಕಡೆಗೆ ಧಾವಿಸಿದೇವು.  

ನಮಗೆ ಪ್ರತ್ಯೇಕ ವಾಹನ ಸಿಕ್ಕ ನಂತರ ಕೇಳಬೇಕೆ? ಸಣ್ಣ ವಯಸ್ಸಿನ ಹುಡುಗರು ಜೋರಾಗಿ ಹಾಡುಗಳನ್ನು ಹಚ್ಚಿದರು. ಬರೀ ಜಾನಪದ ಹಾಡುಗಳನ್ನು ಹಾಕುತ್ತಿದ್ದರು. ಅವುಗಳನ್ನು ಕೇಳದೇ ಬೇರೆ ದಾರಿ ಉಳಿದವರಿಗೆ ಇರಲಿಲ್ಲ. ಮುನವಳ್ಳಿ ಬರುವಷ್ಟರಲ್ಲಿ ನಮ್ಮ ಬಿಟ್ಟು ಹೊರಟಿದ್ದ ಬಸ್ ಸಹ ಹಿಂದೆ ಹಾಕಿ ಮುಂದೆ ಸಾಗಿದೆವು. ಯರಗಟ್ಟಿ, ಗೋಕಾಕ ಮಾರ್ಗವಾಗಿ ಮುಂದೆ ಹೊರಟೆವು. ಬೆಳಿಗ್ಗೆ 11.30 ಗಂಟೆಯಿಂದ ವಾಹನದಲ್ಲಿ ಕುಳಿತುಕೊಂಡು ಸಾಕಾಗಿ ಹೋಗಿತ್ತು. ಘಟಪ್ರಭಾದಲ್ಲಿ ವಾಹನ ನಿಲ್ಲಿಸಿ ನೀರು ಕುಡಿದು ಮುಂದೆ ಸಾಗಿದೆವು. ಹುಕ್ಕೇರಿ ಮೂಲಕ ಬಡಕುಂದ್ರಿ ತಲುಪುವಷ್ಟರಲ್ಲಿ ಮಧ್ಯಾಹ್ನ 3 ಗಂಟೆಯಾಗಿತ್ತು. ಮದುವೆಗೆ ಬಂದವರು ವಾಪಸ್ಸು ಊರ ಕಡೆಗೆ ಮುಖ ಮಾಡಿದ್ದರು.  

ಮೊದಲು ನವ ದಂಪತಿಗಳಿಗೆ ಶುಭ ಹಾರೈಸಿ, ಬಳಿಕ ಭೋಜನ ಮಾಡಲು ಹೊರಟೆ. ಭೋಜನ ಸವಿದ ನಂತರ ದೇವಸ್ಥಾನದ ಸುತ್ತಮುತ್ತಲೂ ಅಲೆದಾಡಿದೆ. ಹತ್ತಿರದಲ್ಲಿದ್ದ ಹಿರಣ್ಯಕೇಶಿ ನದಿಗೆ ಭೇಟಿ ನೀಡಿದೆ. ಅಲ್ಲಿನ ಸ್ಥಳೀಯರು ಕಾಶಿ ಮಾದರಿಯಲ್ಲಿ ಹಿರಣ್ಯಕೇಶಿ ನದಿಗೆ ಗಂಗಾರತಿ ಮಾಡಲಾಗುತ್ತದೆ. ಅಲ್ಲದೇ ಈ ದೇವಸ್ಥಾನದ ವಿಗ್ರಹವು ನದಿಯಲ್ಲಿ ದೊರೆತಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ಈ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂಬ ನಾಮಫಲಕವನ್ನು ದೇವಸ್ಥಾನದಲ್ಲಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ದೇವಸ್ಥಾನವು ನೋಡಲು ತುಂಬಾ ಸುಂದರವಾಗಿದೆ.  

ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಅಲ್ಲದೇ ದೇವಸ್ಥಾನದ ಗೋಪುರ ಮತ್ತು ಗರ್ಭಗುಡಿಯು ಗಮನ ಸೆಳೆಯುತ್ತದೆ. ಪಕ್ಕದಲ್ಲಿ ಹರಿಯುವ ಹಿರಣ್ಯಕೇಶಿ ನದಿಯನ್ನು ನೋಡಬಹುದು. ಮದುವೆ ಮುಗಿಸಿಕೊಂಡು ವಾಪಸ್ಸು ಬರುವಾಗ ಗೋಕಾಕನಲ್ಲಿ ಗೋಕಾಕ ಕರದಂಟು ಮತ್ತು ಬೆಳಗಾವಿ ಕುಂದಾ ಖರೀದಿಸಿದೆ. ಮರಳಿ ಊರು ತಲುಪುವಷ್ಟರಲ್ಲಿ ರಾತ್ರಿ 9.30 ಗಂಟೆಗೆ ಆಗಿತ್ತು. ಮೊದಲೇ ಸುಸ್ತಾಗಿದ್ದರಿಂದ ಊಟ ಮಾಡಿ ನಿದ್ರೆಗೆ ಜಾರಿದೆ. ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.