ಗಣೇಶ್ ಪವಾರ್‌ಗೆ ಪತ್ರಿಕಾ ವಿತರಕರ ಸಂಘದಿಂದ ಸನ್ಮಾನ

ಗಣೇಶ್ ಪವಾರ್‌ಗೆ ಪತ್ರಿಕಾ ವಿತರಕರ ಸಂಘದಿಂದ ಸನ್ಮಾನ  Ganesh Pawar honored by the Newspaper Distributors Association

ಲೋಕದರ್ಶನ ವರದಿ 

          ರಾಣೇಬೆನ್ನೂರ  17: ತಮ್ಮ ಉದ್ದಿಮೆಯ ಜೊತೆಗೆ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿರುವ ಗಣೇಶ ಪವಾರ ಕಾರ್ಯ ಶ್ಲಾಘನೀಯವಾದುದು ಎಂದು ಪತ್ರಿಕಾ ವಿತರಕರ ಸಂಘದ ಜಿಲ್ಲಾ ಅಧ್ಯಕ್ಷ ಸಂಕಪ್ಪ ಮಾರನಾಳ ಹೇಳಿದರು. 

        ನಗರದ ಅಕ್ಷಯ ಹೋಟೆಲ್ ಮಾಲೀಕ ಗಣೇಶ ಪವಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಕಳೆದ 25 ವರ್ಷಗಳಿಂದ ಹೊಟೇಲ್ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಹಲವಾರು ಸಂಘ, ಸಂಸ್ಥೆಗಳಿಗೆ ಹಾಗೂ ಪತ್ರಿಕಾ ವಿತರಕರ ಸಂಘಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ತಮ್ಮನ್ನು ತಾವು ಗುರ್ತಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಈ ಸೇವಾ ಮನೋಭಾವ ನಿರಂತರ ಸಾಗಲಿ ಎಂದು ಆಶಿಸಿದರು. 

         ಪತ್ರಿಕಾ ವಿತರಕರ ಸಂಘದ ತಾಲೂಕ ಅಧ್ಯಕ್ಷ ಪರಶುರಾಮ ಕಾಳೇರ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಪತ್ರಿಕೆಗಳು ತಮ್ಮ ಮೌಲ್ಯಗಳ ಜೊತೆಗೆ ವಿಶ್ವಾಸಾರ್ಹತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡಾ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳಿಗೆ ಪ್ರೋತ್ಸಾಹ ಸಿಗದೇ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.  

        ಪತ್ರಿಕಾ ವಿತರಕರು ಮಳೆ, ಗಾಳಿ, ಚಳಿ ಎನ್ನದೇ ಸದಾ ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಪತ್ರಿಕಾ ಸಂಸ್ಥೆಯವರಿಂದ ಇದುವರೆಗೂ ಏಜೆಂಟರಿಗಾಗಲೀ, ವಿತರಕರಿಗಾಗಲೀ ಆರ್ಥಿಕ ಭದ್ರತೆ, ಸೇವಾ ಭದ್ರತೆ ಸಿಕ್ಕಿರುವುದಿಲ್ಲಾ. ಪತ್ರಿಕೆಗಳ ವಿತರಣೆಯಿಂದಲೇ ಅನೇಕ ಕುಟುಂಬಗಳು ಜೀವನೋಪಾಯ ಕಂಡುಕೊಳ್ಳುತ್ತಿವೆ. ಆದ್ದರಿಂದ ಸರಕಾರಗಳು ಪತ್ರಿಕಾ ವಿತರಕರ ಕಲ್ಯಾಣ ನಿಧಿ ಮೂಲಕ ಆರ್ಥಿಕ ಭದ್ರತೆ ಜೊತೆಗೆ ವಿಮಾ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು. 

          ಗಣೇಶ ಪವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜೀವನದ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿರಿಸಿದರೆ ಆತ್ಮ ತೃಪ್ತಿ ಲಭಿಸುವುದು. ಯಶಸ್ಸು ಅನ್ನುವುದು ಒಂದು ದಿನದಲ್ಲಿ ಘಟಿಸುವಂತಹುದಲ್ಲ ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಅವಶ್ಯಕ ಆದರೆ ಇಂದಿನ ಯುವ ಪೀಳಿಗೆ ಇದಕ್ಕೆ ಅಪವಾದವಾಗಿದ್ದಾರೆ ಎಂದರು. 

         ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಮಂಜುನಾಥ ಹೊಸಪೇಟೆ, ನಾಗರಾಜ ಹಾವನೂರ, ವಿಶ್ವನಾಥ ಕುಂಬಳೂರ, ಏಜೆಂಟರಾದ ವಾಗೀಶ ಹಿರೇಮಠ, ವಿನಾಯಕ ಸಾಗರ, ಗುರುರಾಜ ವರಮೂರ್ತಿ, ಶಿವಕುಮಾರ ಹಿರೇಮಠ ಸೇರಿದಂತೆ ಇತರರು ಇದ್ದರು.