ಕೊಪ್ಪಳ 31: ಬ್ರಿಟೀಷರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸದೆ, ಸತ್ಯ, ಅಹಿಂಸೆ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ವ್ಯಕ್ತಿ ಗಾಂಧೀಜಿ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಪ್ರಾದೇಶಿಕ ಜನಸಂಪರ್ಕ ಕಾರ್ಯಲಯ ಬೆಂಗಳೂರು, ಕ್ಷೇತ್ರ ಜನಸಂಪರ್ಕ ಕಾರ್ಯಲಯ ಬಳ್ಳಾರಿ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು (ಜ.31) ನಡೆದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮೋತ್ಸವ ಹಾಗೂ ಭಾರತ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸ್ಪೃಶ್ಯತೆ, ಸ್ತ್ರಿ ಸಮಾನತೆ, ಸ್ವಚ್ಚತೆ ಕಾಪಾಡುವುದು ಗಾಂಧೀಜಿಯವರ ಜೀವನದ ಕನಸಾಗಿತ್ತು. ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಊಟ, ಬಟ್ಟೆ ಸಿಗುವವರೆಗೂ, ಬಟ್ಟೆಯನ್ನು ಧರಿಸಲು ನಿರಾಕರಿಸಿದ ಏಕೈಕ ವ್ಯಕ್ತಿ ಈ ಮಹಾತ್ಮ. ಗಾಂಧೀಜಿಯವರು ಪಾಲಿಸಿದ ಮೌಲ್ಯಗಳನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಿರಿಯ ಸ್ವಾತಂತ್ರ ಹೋರಾಟಗಾರರಾದ ಸುಮಂತರಾವ್ ಪಟವಾರಿ ಮಾತನಾಡಿ, ಯುವಶಕ್ತಿ ಉತ್ತೇಜನದಿಂದ ಮಾತ್ರ ಭಾರತ ದೇಶ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಕರು ಭಾರತ ದೇಶವನ್ನು ಅಭಿವೃದ್ಧಿಯತ್ತ ಸಾಗಿಸಲು ಪಣತೊಡಬೇಕು ಎಂದರು.
ಗವಿಸಿದ್ಧೇಶ್ವರ ಟ್ರಸ್ಟಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಏಕನಾಥ ಏಕಕೋಟೆ ಅವರು ವಿಶೇಷ ಉಪನ್ಯಾಸ ನೀಡಿ, ಪ್ರಸ್ತುತ ಭಾರತದೇಶ ಧನಾತ್ಮಕವಾಗಿ ಪ್ರಗತಿ ಸಾಧಿಸುತ್ತಿದೆ ಅಂದರೆ, ಅದಕ್ಕೆ ಗಾಂಧೀಜಿಯವರ ಮೂಲ ತತ್ವಗಳೇ ಕಾರಣವಾಗಿವೆ. ಗಾಂಧೀಜಿಯವರು ಇಡಿ ಭಾರತದೇಶವನ್ನು ಸಂಚರಿಸಿ, ಜನಸಾಮಾನ್ಯರ ಬದುಕು, ಸಿದ್ಧಾಂತ, ಪದ್ಧತಿಗಳನ್ನು ಅರಿತು, ಅವುಗಳ ಬದಲಾವಣೆಗೆ ಅಡಿಪಾಯ ಹಾಕಿದ ಮೊದಲಿಗರು. ಆದ್ದರಿಂದ ವಿದ್ಯಾಥರ್ಿಗಳು ಗಾಂಧೀಜಿ ಮತ್ತು ಅಂಬೆಡ್ಕರ್ ಅವರು ಬರೆದ ಪುಸ್ತಕಗಳನ್ನು ಓದುವ ಮೂಲಕ ಅವರ ವಿಚಾರಗಳನ್ನು ಅರಿಯಬೇಕು ಎಂದು ಅಭಿಪ್ರಾಯಪಟ್ಟರು.
ಗವಿಸಿದ್ಧೇಶವರ ಕಾಲೇಜಿನ ಪ್ರಾಚಾರ್ಯರಾದ ಮನೋಹರ್ ಎಸ್.ದಾಲ್ಮಿ ಅವರು ಮಾತನಾಡಿ, ಗಾಂಧೀಜಿಯವರ ಜೀವನ ಸಾಧನೆಗಳ ಕುರಿತು ವಿದ್ಯಾಥರ್ಿಗಳು ಕುಲಂಕುಷವಾಗಿ ಅಧ್ಯಯನ ಮಾಡಬೇಕು. ಕಾಲೇಜಿನಲ್ಲಿ ಮೂರು ದಿನಗಳ ಕಾಲ ಗಾಂಧೀಜಿ ಜೀವನ ಕುರಿತು ಏರ್ಪಡಿಸಲಾದ ಛಾಯಚಿತ್ರ ಪ್ರದರ್ಶನದ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಗಾಂಧೀಜಿ 150 ಜನ್ಮೋತ್ಸವದ ನಿಮಿತ್ಯ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧಗಳಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ, ತೃತಿಯ, ಚತುರ್ಥ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ರಾಷ್ಟ್ರಗೀತೆಯನ್ನು ಹಾಡಲಾಯಿತು.
ಸಮಾರಂಭದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಲಯ ಬಳ್ಳಾರಿಯ ಉಪನಿರ್ದೇಶಕ ಜಿ.ಡಿ ಹಳ್ಳಿಕೇರಿ, ಜಿಲ್ಲಾ ಪಂಚಾಯತ್ ಎಸ್.ಬಿ.ಎಂ ಸಂಯೋಜಕ ಮಾರುತಿ ನಾಯ್ಕರ್, ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ನಾಗರಾಜ ದಂಡೋತಿ, ಗವಿಸಿದ್ಧೇಶ್ವರ ಟ್ರಸ್ಟಿನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಸೇರಿದಂತೆ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವರ್ಷಿಣಿ ಪ್ರಾರ್ಥಿಸಿದರು. ಬೆಂಗಳೂರಿನ ಮಾಧ್ಯಮ ಮತ್ತು ಸಂವಹನ ಅಧಿಕಾರಿ ಪಿ.ಜಿ ಪಾಟೀಲ್ ಸ್ವಾಗತಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಟಿ.ಕರಿಬಸವೇಶ್ವರ ಕಾರ್ಯಕ್ರಮ ನಿರೂಪಿಸಿದರು. ಎನ್.ರಾಮಕೃಷ್ಣ ಕೊನೆಯಲ್ಲಿ ವಂದಿಸಿದರು.