ಬೆಂಗಳೂರು, ಮಾ 5,ಪೊಲೀಸ್ ಸಿಬ್ಬಂದಿಗೆ ಸೂರು ಒದಗಿಸಲು ಮುಂದಾಗಿರುವ ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿಗಾಗಿ "ಪೊಲೀಸ್ ಗೃಹ ಭಾಗ್ಯ-2020" ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಈ ಯೋಜನೆ ಪ್ರಕಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, 2020-21ನೇ ಸಾಲಿನಲ್ಲಿ ಯೋಜನೆಯ ಕಾಮಗಾರಿಗಳನ್ನು ಮುಂದುವರಿಸಲು 200 ಕೋಟಿ ರೂ. ಒದಗಿಸಲಾಗುವುದು. ಜೊತೆಗೆ, "ಪೊಲೀಸ್ ಗೃಹ-2025" ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದರು. ಪ್ರಸಕ್ತ ಬಜೆಟ್ ನಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ವಲಯಕ್ಕೆ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಸುರಕ್ಷಾ ಆ್ಯಪ್ ವಿಸ್ತರಣೆ: ರಾಜ್ಯದ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಸಲುವಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ 'ಸುರಕ್ಷಾ ಆ್ಯಪ್ ' ಅನ್ನು ಬೆಂಗಳೂರು ನಗರವೊಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ.2020-21ನೇ ಸಾಲಿನಲ್ಲಿ ಈ ಆ್ಯಪ್ ಅನ್ನು ರಾಜ್ಯಾದ್ಯಂತ ವಿಸ್ತರಿಸಿ ಸಂಕಷ್ಟದ ಸಮಯದಲ್ಲಿ ಮಹಿಳೆಯರಿಗೆ ತುರ್ತು ಸ್ಪಂದನಾ ವಾಹನಗಳ ಮೂಲಕ ರಕ್ಷಣೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು. ಮಹಿಳಾ ಸುರಕ್ಷತೆಗೆ ‘ಪಿಂಕ್ ಹೊಯ್ಸಳ’: ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕಾಪಾಡಲು 75 ಹೊಯ್ಸಳ ವಾಹನಗಳನ್ನು ಖರೀದಿಸಲಾಗುವುದು. ಇವುಗಳಲ್ಲಿ ಕೆಲವನ್ನು ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಹೊಯ್ಸಳವನ್ನಾಗಿ ಬಳಸಲಾಗುವುದು. ಇತರ ಜಿಲ್ಲೆಗಳಿಗೆ ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ ಬಳಸಲು 75 ವಾಹನ ಖರೀದಿಸಲಾಗುವುದು ಎಂದು ಅವರು ಪ್ರಕಟಿಸಿದರು. 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆ: ಕೆ-ಸೇಫ್ ಅಡಿಯಲ್ಲಿ ಮುಧೋಳ, ಯಲಬುರ್ಗಾ, ತೀರ್ಥಹಳ್ಳಿ, ನರಸಿಂಹರಾಜಪುರ, ಗೋಣಿಕೊಪ್ಪ, ಕುಣಿಗಲ್, ದೇವನಹಳ್ಳಿ, ಬೈಂದೂರು, ಮುಂಡಗೋಡ ಮತ್ತು ಶಿರಹಟ್ಟಿಯಲ್ಲಿ 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪಿಸಲಾಗುವುದು. ಕಾರವಾರ ಬಂದರಿನಲ್ಲಿ ಸುಮಾರು 19 ಕೋಟಿ ರೂ.ಗಳ ಅಂದಾಜಿನಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. ಬೆಂಗಳೂರು ನಗರದ ಸಂಚಾರ ವೈಟ್ಫೀಲ್ಡ್ ನಲ್ಲಿ ಹೊಸದಾಗಿ ಸಂಚಾರ ಉಪ ವಿಭಾಗ ಸ್ಥಾಪನೆ, ಪೊಲೀಸ್ ಶ್ವಾನದಳದ ಬಲವರ್ಧನೆಗೆ 2.5 ಕೋಟಿ ರೂ. ಅನುದಾನ ಮೀಸಲು, ಪೊಲೀಸ್ ತರಬೇತಿ ಶಾಲೆಗಳಲ್ಲಿ ಹಾಗೂ ಸಿ.ಎ.ಆರ್., ಡಿ.ಎ.ಆರ್. ಕೇಂದ್ರ ಸ್ಥಾನಗಳಲ್ಲಿ ರಿಯಾಯಿತಿ ದರದಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ ನೀಡಲಾಗುವುದು. ರಾಜ್ಯದ ರಸ್ತೆ ಸಾರಿಗೆ ನಿಗಮಗಳ ವತಿಯಿಂದ 2450 ಹೊಸ ಬಸ್ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.