ಬೆಂಗಳೂರು, ಮಾ.9,ಹುಕ್ ಆರ್ ಕುಕ್ ಕ್ಯಾಚ್ ದಿ ಪವರ್ ಎಂಬ ರೀತಿಯಲ್ಲಿ ಅಧಿಕಾರ ಹಿಡಿದಿರಿ, ವಾಮಮಾರ್ಗದ ಮೇಲೆ ಅಧಿಕಾರಕ್ಕೆ ಬಂದಿದ್ದೀರಿ, ಆದರೆ ನೀವು ಏನೂ ಮಾಡದೇ ರಾಜ್ಯಪಾಲರಿಂದ ಬರೀ ಸುಳ್ಳಿನ ಕಂತೆಯನ್ನು ಹೇಳಿಸಿದ್ದೀರಿ... ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಎಂದು ರಾಜ್ಯಪಾಲರ ಭಾಷಣವನ್ನು ಟೀಕಿಸಿದ ಪರಿ...ವಿಧಾನ ಪರಿಷತ್ ಕಲಾಪದಲ್ಲಿಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಾಜ್ಯಪಾಲರು ಮಸಾಲೆ, ಉಪ್ಪು ಖಾರ ಇಲ್ಲದ ಸಪ್ಪೆಯ ಭಾಷಣ ಮಾಡಿದ್ದಾರೆ, ಅದರಲ್ಲಿ ಒಗ್ಗರಣೆಯೂ ಇಲ್ಲ, ಹರಸಾಹಸ ಮಾಡಿ ಸರ್ಕಾರ ರಚಿಸುವ ಮ್ಯಾಜಿಕ್ ಸಂಖ್ಯೆ ತಲುಪಲಾಯಿತು. ಮುಖ್ಯಮಂತ್ರಿಯವರ ಪ್ರಮಾಣ ವಚನ ಕೂಡ ವಿಳಂಬವಾಯಿತು. "ಬೇಗ ಅವಕಾಶ ನೀಡುತ್ತೀರೋ ಇಲ್ಲ ಹಿಂದಿನ ನಿರ್ಧಾರ ತೆಗೆದುಕೊಳ್ಳಲೋ" ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ ನಂತರ ಅನುಮತಿ ನೀಡಲಾಯಿತು, ನಂತರ ಸಂಪುಟಕ್ಕೆ ಸಚಿವರನ್ನು ತೆಗೆದುಕೊಳ್ಳಲು ವಿಳಂಬ ಮಾಡಲಾಯಿತು, ನೆರೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಒಬ್ಬರೆ ಪ್ರವಾಸ ಮಾಡಿದ್ದರು, ಅವರು ದೈತ್ಯ ಶಕ್ತಿ ನನಗೂ ಗೌರವವಿದೆ, ಆದರೆ ಸಂಪುಟ ಸದಸ್ಯರನ್ನು ನೇಮಿಸಿಕೊಂಡಿದ್ದರೆ ಅನುಕೂಲ ಆಗುತ್ತಿತ್ತು. ಅದನ್ನು ಮಾಡಲಿಲ್ಲ ಎಂದು ನೆರೆ ಸನ್ನಿವೇಶ ಎದುರಿಸಿದ ಪರಿಗೆ ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರ ರಚನೆಗೆ ಶಾಸಕರನ್ನು ನಮ್ಮ ಕಡೆಯಿಂದ ಓಡಿಸಿಕೊಂಡು ಹೋದರು, ಬಾಂಬೆಯಲ್ಲಿ ಹೋಟೆಲ್ ನಲ್ಲಿ ಅವರನ್ನು ಇರಿಸಿ ಬೌನ್ಸರ್ ಗಳನ್ನು ನೇಮಿಸಲಾಗಿತ್ತು,
ಅಲ್ಲಿನ ಸರ್ಕಾರದ ಅಙಧಿಕರ ಬಳಸಿ ಅವರಿಗೆ ರಕ್ಷಣೆ ಕೊಡಲಾಗಿತ್ತು. ಆದರೂ ಇದರ ಬಗ್ಗೆ ಬಿಜೆಪಿಯವರು ಏನೂ ಗೊತ್ತಿಲ್ಲದಂತೆ ನಟಿಸಿದರು. ನಂತರ ಹಣದ ಹೊಳೆ, ಹೆಂಡದ ಹೊಳೆ ಹರಿಸಿಯೋ ಏನೋ ಅವರಲ್ಲಿ 12 ಜನ ಆಯ್ಕೆಯಾದರು. ಆದರೂ ಜನರ ತೀರ್ಪು ಒಪ್ಪುತ್ತೇವೆ, 12 ಜನ ಮರು ದಿನವೇ ಸಚಿವರಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಆಗಲಿಲ್ಲ, ನುಡಿದಂತೆ ನಡೆಯಲಿಲ್ಲ. ಗೆದ್ದ ತಕ್ಷಣವೇ ನಿಮ್ಮೆಲ್ಲರಿಗೂ ಸಚಿವ ಸ್ಥಾನ ನೀಡುತ್ತೇನೆ ಎಂದಿದ್ದರು. ಈ ರೀತಿಯ ಭರವಸೆ ನೀಡಿದ್ದು ಆಮಿಷ ಒಡ್ಡಿದಂತಲ್ಲವೇ?. ನುಡಿದಂತೆ ನಡೆಯುವ ಕುರಿತು ಶರಣರ ವಚನ ಜಾಚುತಪ್ಪದೆ ಪಾಲಿಸಿದ್ದೀರಿ ಎಂದು ವ್ಯಂಗ್ಯವಾಡಿದರು.ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿತು. ತೇಜಸ್ವಿನಿಗೌಡ ಮೈತ್ರಿ ಸರ್ಕಾರ ಬಿದ್ದಿದ್ದು ವಾಮಮಾರ್ಗದಿಂದ ಬಿಜೆಪಿ ಸರ್ಕಾರ ಬಂದಿದ್ದು ರಾಜಮಾರ್ಗದಿಂದ ಎಂದರು.ನಂತರ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಹೊಸದಾಗಿ ಸಚಿವರಾದ 10 ಮಂದಿಯಲ್ಲಿ ಹುರುಪು ಕಾಣುತ್ತಿಲ್ಲ, ಬಹಳ ದಿನದ ಕನಸು ನನಸಾಯ್ತು ಎಂದುಕೊಂಡಿದ್ದ ಹುಮ್ಮಸ್ಸು ಕಾಣುತ್ತಿಲ್ಲ ಎಂದರು.ಈ ವೇಳೆ ನಿಮ್ಮನ್ನು ಸಂಪುಟದಿಂದ ಕೈಬಿಟ್ಟಿದ್ದರಲ್ಲ ಎನ್ನುವ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಆರ್ ಪಾಟೀಲ್, ಹಿಂದೆ ಸಂಪುಟದಿಂದ ಕೈಬಿಡುವ ಪಟ್ಟಿಯಲ್ಲಿ ನನ್ನ ಹೆಸರಿತ್ತು, ಅದನ್ನು ನಾನು ಒಪ್ಪಿಕೊಂಡೆ, ಸಿಎಂ ಪರಮಾಧಿಕಾರ ಅದು, ಅದರಂತೆ ಕೈಬಿಟ್ಟರು, ನಂತರ ಸಿದ್ದರಾಮಯ್ಯ ಸಿಕ್ಕಾಗ ಮಂತ್ರಿಯಾಗಿಮೂರು ವರ್ಷಕ್ಕೆ ಮೂರು ಕೋಟಿ ಸಾಲ ಮಾಡಿದ್ದೆ, ಇನ್ನೆರಡು ವರ್ಷ ಇದ್ದರೆ ಇನ್ನೆರಡು ಕೋಟಿ ಸಾಲ ಆಗುತ್ತಿತ್ತು.
ಅಷ್ಟರಲ್ಲಿ ನನ್ನ ಕೆಳಗಿಳಿಸಿ ಎರಡು ಕೋಟಿ ಸಾಲ ಕಡಿಮೆ ಮಾಡಿದಿರಿ ಎಂದೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.ಈ ವೇಳೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಈಗ ಹಾಗಿಲ್ಲ ಬಿಡಿ, ಮೇಲಿನ ಶಂಖದಿಂದ ಬಿದ್ದರೆ ಮಾತ್ರ ತೀರ್ಥ. ಇದು ಎಲ್ಲಾ ಪಕ್ಷದ್ದೂ ಅಷ್ಟೇ ಕಥೆ ...ಎಂದು ಸಂಪುಟ ರಚನೆಗೂ ಹೈಕಮಾಂಡ್ ಸಂಸ್ಕೃತಿ ಇರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.ನಂತರ ಮಾತು ಮುಂದುವರೆಸಿದ ಎಸ್.ಆರ್ ಪಾಟೀಲ್, ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ, ಸುಳ್ಳಿನ ಸರಮಾಲೆ ಓದಿದ್ದಾರೆ, ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಬೇಕು ಆದರೆ ಇವರು ಅಸ್ಕಲಿಲತವಾಗಿ ಸುಳ್ಳು ಹೇಳಿದ್ದಾರೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಸುಳ್ಳು ಹೇಳುವುದಕ್ಕೂ ಇತಿಮಿತಿ ಇದೆ, ಸುಳ್ಳಿಗೆ ನೋಬಲ್ ಪಾರಿತೋಷಕ ಇಟ್ಟಿದ್ದರೆ ಅದು ಇವರಿಗೆ ಸಿಕ್ತಾ ಇತ್ತು, ಇದು ದಮ್ ಇಲ್ಲದ ಭಾಷಣ, ತಾಕತ್ತು ಇಲ್ಲದ ಭಾಷಣ, ಹಾವಿನ ಪೊರೆ ರೀತಿಯ ಭಾಷಣ ಎಂದು ರಾಜ್ಯಪಾಲರ ಭಾಷಣವನ್ನು ಟೀಕಿಸಿದರು.ಕಳ್ಳತನ ನಿಲ್ಲಿಸಲು ಕಳ್ಳರ ಕೈಗೆ ಕೀಲಿಕೈ ಕೊಟ್ಟಂತಾಗಿದೆ ಎಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದನ್ನು ಪ್ರಸ್ತಾಪಿಸಿದರು
.ಇದಕ್ಕೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು, ಇದು ಸಂವಿಧಾನ ಬಾಹಿರ ಹೇಳಿಕೆ ಎಂದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದಕ್ಕೆ ದನಿಗೂಡಿಸಿ, ಅಂಕಿ ಅಂಶದ ಆಧಾರದಲ್ಲೇ ನಮ್ಮಸರ್ಕಾರ ಬಂದಿದೆ. ಈ ರೀತಿ ಹೇಳಿಕೆ ಸಲ್ಲದು ಹೇಳಿಕೆಯನ್ನು ಕಡತದಿಂದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಆಡಳಿತ ಪಕ್ಷದ ಆಗ್ರಹಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಸ್.ಆರ್ ಪಾಟೀಲ್, ಭಾಷಣದಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದರೆ ನಾನೇ ಸೆಲ್ಯೂಟ್ ಮಾಡುತ್ತಿದ್ದೆ. ಆದರೆ ಅದನ್ನು ಮಾಡಿಲ್ಲ. ನೆರೆ ಸಂತ್ರಸ್ತರ ಮನೆ ಕಟ್ಟಲು ಐದು ಲಕ್ಷ ಕೊಟ್ಟಿದ್ದೆವೆ ಎಂದು ಭಾಷಣದಲ್ಲಿ ಹೇಳಲಾಗಿದೆ. ಆದರೆ ಎಲ್ಲಿ ಕೊಟ್ಟಿದಾರೆ, ಒಂದು ಲಕ್ಷ ಕೊಟ್ಟು ಸುಮ್ಮನಾಗಿದ್ದಾರೆ, ಅತಿ ಹೆಚ್ಚು ಪರಿಹಾರ ನಾವು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ, ಕೊಡಗಿನಲ್ಲಿ ನಾವು 9 ಲಕ್ಷ ಕೊಟ್ಟಿಲ್ಲವೇ, ಇವರ ಬರೀ ಸುಳ್ಳಿನ ಕಂತೆಯನ್ನೇ ಹೇಳಿಸಿದ್ದಾರೆ ಎಂದು ರಾಜ್ಯಪಾಲರ ಭಾಷಣವನ್ನು ಪ್ರತಿಪಕ್ಷ ನಾಯಕರು ಟೀಕಿಸಿದರು.