ಸಂಗೀತ ಕ್ಷೇತ್ರಕ್ಕೆ ಜಿ.ಎಸ್. ಹೆಗಡೆಯವರ ಕೊಡುಗೆ ಅಪಾರ: ಪಂ. ವೆಂಕಟೇಶಕುಮಾರ

ಸಂಗೀತ ಕ್ಷೇತ್ರಕ್ಕೆ ಜಿ.ಎಸ್. ಹೆಗಡೆಯವರ ಕೊಡುಗೆ ಅಪಾರ: ಪಂ. ವೆಂಕಟೇಶಕುಮಾರ G.S. Hegde’s Contribution to the Field of Music is Immense: Pt. Venkatesh Kumar

ಧಾರವಾಡ, ಆ. 16: ಬೆಂಗಳೂರಿನಲ್ಲಿ ‘ಸಪ್ತಕ’ ಸಂಸ್ಥೆಯನ್ನು ಹುಟ್ಟುಹಾಕಿ, ರಾಜ್ಯದಾದ್ಯಂತ ಯಶಸ್ವಿ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಜಿ.ಎಸ್. ಹೆಗಡೆ ಅವರ ಸಂಗೀತ ಕ್ಷೇತ್ರದ ಕೊಡುಗೆ ಅಪಾರ ಎಂದು ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶಕುಮಾರ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶ್ರೀರಾಮ ಕಲಾವೇದಿಕೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿ.ಎಸ್. ಹೆಗಡೆ ಅವರ ಸನ್ಮಾನ ಹಾಗೂ ಶ್ರಾವಣ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಿ.ಎಸ್. ಹೆಗಡೆ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಧಾರವಾಡದಲ್ಲಿ ಸನ್ಮಾನಿಸಿರುವುದು ಸ್ತುತ್ಯಾರ್ಹ. ಸಂಗೀತಕ್ಕಾಗಿ ಅವರು ಅವಿರತವಾಗಿ ದುಡಿಯುತ್ತಿದ್ದಾರೆ. ಸಂಘಟನಾ ಕಾರ್ಯದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಪ್ರತಿವರ್ಷ ನಾಡಿನಾದ್ಯಂತ ಸುಮಾರು 50 ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸುಲಭದ ಕೆಲಸವಲ್ಲ. 75ರ ಹರೆಯದಲ್ಲಿಯೂ ಇಂತಹ ಕಾರ್ಯವನ್ನು ಮುಂದುವರಿಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ತಬಲಾ ವಾದಕ ಪಂ. ರಘುನಾಥ ನಾಕೋಡ ಮಾತನಾಡಿ, ಜಿ.ಎಸ್. ಹೆಗಡೆ ಅವರು ಬಾಲ, ಯುವ ಹಾಗೂ ಪ್ರಬುದ್ಧ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಹಿರಿಯ ಕಲಾವಿದರನ್ನು ಸನ್ಮಾನಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್. ಹೆಗಡೆ, ವಿದ್ಯಾಕಾಶಿ ಧಾರವಾಡದಂತಹ ಸಂಗೀತ-ಸಾಹಿತ್ಯದ ನೆಲದಲ್ಲಿ ಹಿರಿಯ ಕಲಾವಿದರು ಹಾಗೂ ಸಂಗೀತ ರಸಿಕರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿರುವುದು ತಮ್ಮ ಪಾಲಿಗೆ ಅವಿಸ್ಮರಣೀಯ ಕ್ಷಣ ಎಂದು ಭಾವುಕರಾದರು. ತಮ್ಮಿಂದ ನಡೆಯುತ್ತಿರುವ ಕಾರ್ಯಗಳಿಗೆ ಇಡಗುಂಜಿ ಮಹಾಗಣಪತಿಯ ಅನುಗ್ರಹವೇ ಕಾರಣ. “ನೀವು ಹೇಗೆ ಮಾಡುತ್ತೀರಿ ಎಂದು ಕೇಳಿದರೆ, ಅದಕ್ಕೆ ನನ್ನಲ್ಲೇ ಉತ್ತರವಿಲ್ಲ. ಅದ್ಹೇಗೋ ನಡೆಯುತ್ತದೆ. ನಾನು ನಿಮಿತ್ತ ಮಾತ್ರ,” ಎಂದು ಹೇಳಿದರು.

ಶ್ರೀರಾಮ ಕಲಾವೇದಿಕೆಯ ರೂವಾರಿ ಪಂ. ರವೀಂದ್ರ ಯಾವಗಲ್ ಮಾತನಾಡಿ, ಜಿ.ಎಸ್. ಹೆಗಡೆ ಅವರು ಸಂಗೀತ ಕ್ಷೇತ್ರದ ಸಂಘಟನೆಯಲ್ಲಿ ‘ಮ್ಯಾರಾಥಾನ್ ಪ್ಲೇಯರ್’ನಂತೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಸೇವೆ ಮುಂದುವರಿಯಲು ನಾವೆಲ್ಲರೂ ಕೈಜೋಡಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಂ. ವೆಂಕಟೇಶಕುಮಾರ ಹಾಗೂ ಪಂ. ರಘುನಾಥ ನಾಕೋಡ ಅವರನ್ನು ಸನ್ಮಾನಿಸಲಾಯಿತು.

ಶ್ರಾವಣ ಸಂಗೀತೋತ್ಸವದ ಅಂಗವಾಗಿ ಧಾರವಾಡ ಘರಾಣೆಯ ಯುವ ಪ್ರತಿಭೆ ಮೊಹಸಿನ್ ಖಾನ್ ಸಿತಾರ್ ವಾದನದ ಮೂಲಕ ಕಲಾಶ್ರೀ ರಾಗವನ್ನು ಆಲಾಪ್, ಜೋಡ್ ಹಾಗೂ ಝಾಲಾ ಸಹಿತವಾಗಿ ಮನಮೋಹಕವಾಗಿ ಪ್ರಸ್ತುತಪಡಿಸಿದರು. ಅವರಿಗೆ ಯುವ ಲಯವಾದಕ ಕಿರಣ ಯಾವಗಲ್ ತಬಲಾ ಸಾಥ್ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ಮುಂಬೈನ ಧನಂಜಯ ಹೆಗಡೆ ಅವರ ಗಾಯನ ಕಾರ್ಯಕ್ರಮ ನಡೆಯಿತು. ಅವರು ಜೈಜಯವಂತಿ ರಾಗವನ್ನು ಪ್ರಸ್ತುತಪಡಿಸಿದ ಬಳಿಕ ಮಧುಕೌಂಸ್ ರಾಗದಲ್ಲಿ ಛೋಟಾ ಖ್ಯಾಲ್ ಹಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದರು. ಅವರಿಗೆ ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಹಾಗೂ ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಿದರು. ಯಶ್ ಹಾಗೂ ಶಿವಾನಿ ಕವಠೇಕರ ತಂಬೂರಿ ಸಾಥ್ ನೀಡಿದರು.

ರವೀಂದ್ರ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರತ್ ದೇಶಪಾಂಡೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಂ. ಸೋಮನಾಥ ಮರಡೂರ, ಪಂ. ಬಿ.ಎಸ್. ಮಠ, ವಿದುಷಿ ಅಕ್ಕಮಹಾದೇವಿ ಮಠ, ಉ. ಫಯಾಜ್ ಖಾನ್, ಪಂ. ಶಾಂತಾರಾಮ ಹೆಗಡೆ, ಉ. ಶಫೀಕ್ ಖಾನ್, ಪಂ. ಜಯತೀರ್ಥ ಮೇವುಂಡಿ, ವಿದುಷಿ ರೇಣುಕಾ ನಾಕೋಡ, ರಾಧಾ ದೇಸಾಯಿ, ಡಾ. ಶಶಿಧರ ನರೇಂದ್ರ, ರವೀಂದ್ರ ಕವಠೇಕರ, ವೀರಣ್ಣ ಪತ್ತಾರ, ಪ್ರಕಾಶ ಬಾಳಿಕಾಯಿ, ವೀಣಾ ಮಠ, ಶುಭಾಂಗಿ ಜಾಧವ, ಬಸವರಾಜ ವಂದಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.