ದೇವರಹಿಪ್ಪರಗಿಯಲ್ಲಿ ನಾಗರ ಪಂಚಮಿ ಸಂಭ್ರಮ ಸಡಗರ
Naga Panchami Celebrated with Grandeur in Devar Hipparagi
ದೇವರಹಿಪ್ಪರಗಿ, ಆ.18: ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದ ಆಗಮನದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಈ ಸಂಭ್ರಮಕ್ಕೆ ನಾಂದಿ ಹಾಡುವ ನಾಗರ ಪಂಚಮಿ ಹಬ್ಬವನ್ನು ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು.
ನಾಗರ ಪಂಚಮಿ ಈ ಭಾಗದಲ್ಲಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಮಣ್ಣಿನ ಸಂಸ್ಕೃತಿ, ಕೃಷಿ ಬದುಕು ಹಾಗೂ ಅಣ್ಣ-ತಂಗಿಯರ ಅವಿನಾಭಾವ ಪ್ರೀತಿಯನ್ನು ಬೆಸೆಯುವ ಭಾವನಾತ್ಮಕ ಹಬ್ಬವಾಗಿದೆ. ಹಬ್ಬದ ಅಂಗವಾಗಿ ಮಹಿಳೆಯರು ಪಟ್ಟಣದ ವಿವಿಧ ದೇವಾಲಯಗಳಲ್ಲಿರುವ ನಾಗರ ಪ್ರತಿಮೆಗಳು, ಕಲ್ಲು ನಾಗರ ಮೂರ್ತಿಗಳು ಹಾಗೂ ಹುತ್ತಗಳಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಗೃಹಿಣಿಯರು ಹಬ್ಬದ ಸಾಂಪ್ರದಾಯಿಕ ಅಡುಗೆ ತಯಾರಿಕೆಯಲ್ಲಿ ತೊಡಗಿದ್ದರು. ಸುಮಂಗಲಿಯರು ಮಕ್ಕಳೊಂದಿಗೆ ಹೊಸ ಬಟ್ಟೆ ಧರಿಸಿ ನಾಗ ದೇವತೆ ದೇವಸ್ಥಾನ, ಕಲ್ಲು ನಾಗರ ಮೂರ್ತಿಗಳು ಹಾಗೂ ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಉಂಡೆ ಹಬ್ಬದ ಸಂಭ್ರಮ:
ನಾಗರ ಪಂಚಮಿ ಹಬ್ಬದ ವಿಶೇಷತೆಯಾದ ವಿವಿಧ ಬಗೆಯ ಉಂಡೆಗಳನ್ನು ಮನೆಗಳಲ್ಲಿ ತಯಾರಿಸಲಾಯಿತು. ಶೇಂಗಾ, ಎಳ್ಳು, ಕಡ್ಲಿ, ಅಳ್ಳಿಟ್ಟು, ಬೇಸನ್ ಸೇರಿದಂತೆ ವಿವಿಧ ಪದಾರ್ಥಗಳಿಂದ ಉಂಡೆ ಹಾಗೂ ಕಡಬುಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಲಾಯಿತು. ಬಳಿಕ ನೆರೆಹೊರೆಯವರು ಹಾಗೂ ಬಂಧು-ಬಳಗದವರಿಗೆ ಉಂಡೆ ಹಂಚಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಜೋಕಾಲಿ ಹಬ್ಬ ಬಲು ಜೋರು:
ನಾಗರ ಪಂಚಮಿ ದಿನದಂದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಜೋಕಾಲಿ ಆಡುವ ಸಂಭ್ರಮ ಕಂಡುಬಂತು. ಚಿಕ್ಕಮಕ್ಕಳು ಮನೆಗಳಲ್ಲಿ ಕಟ್ಟಿದ್ದ ಜೋಕಾಲಿಗಳಲ್ಲಿ ಆಟವಾಡಿ ಖುಷಿಪಟ್ಟರೆ, ದೊಡ್ಡವರು ಬಯಲಿನ ದೊಡ್ಡ ಮರಗಳಿಗೆ ಕಟ್ಟಿದ್ದ ಜೋಕಾಲಿಗಳಲ್ಲಿ ಜೀಕುತ್ತಾ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರೂ ಜೋಕಾಲಿ ಆಡುವ ಮೂಲಕ ಹಬ್ಬದ ಸಡಗರ ಹೆಚ್ಚಿಸಿದರು.
ದೇವಾಲಯಗಳಲ್ಲಿ ಭಕ್ತರ ದಂಡು:
ಪಟ್ಟಣದ ಐತಿಹಾಸಿಕ ಶ್ರೀ ಕಲ್ಮೇಶ್ವರ ದೇವಸ್ಥಾನ, ರಾವುತರಾಯ ಮಲ್ಲಯ್ಯನ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದರಿಂದ ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ವಿಶೇಷವಾಗಿ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಸಂಭ್ರಮದಿಂದ ತವರು ಮನೆಗೆ ಆಗಮಿಸಿ ನಾಗರ ಪಂಚಮಿ ಆಚರಣೆಯಲ್ಲಿ ಪಾಲ್ಗೊಂಡರು. ಕುಟುಂಬದವರು ಅವರಿಗೆ ಬಾಗಿನ ಅರ್ಪಿಸಿ ಶುಭ ಹಾರೈಸಿದರು. ಹೀಗೆ ದೇವರಹಿಪ್ಪರಗಿಯಲ್ಲಿ ನಾಗರ ಪಂಚಮಿ ಹಬ್ಬವು ಧಾರ್ಮಿಕ ಭಕ್ತಿ, ಸಾಂಪ್ರದಾಯಿಕ ಆಚರಣೆ ಹಾಗೂ ಕೌಟುಂಬಿಕ ಬಾಂಧವ್ಯದೊಂದಿಗೆ ಸಂಭ್ರಮದಿಂದ ಜರುಗಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 