ಲೋಕದರ್ಶನ ವರದಿ
ಕುಮಟಾ : ಜಿ ಎಲ್ ಹೆಗಡೆ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲರೂ ಮೆಚ್ಚುವ ಸೇವೆ ನೀಡಿದ್ದಾರೆ. ಅವರು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ ಎಂದು ಎ ವಿ ಬಾಳಿಗಾ ಮಹಾವಿದ್ಯಾಲಯದ ಆಡಳಿತ ಸಮಿತಿಯ ಕಾರ್ಯದರ್ಶಿ ವಿನೋದ ಪ್ರಭು ಎಂದರು.
ಅವರು ಶನಿವಾರ ಇಲ್ಲಿನ ಡಾ ಎ ವಿ ಬಾಳಿಗಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಜಿ ಎಲ್ ಹೆಗಡೆ ಅವರಿಗೆ ನಿವೃತ್ತಿಗೊಂಡ ನಿಮಿತ್ತ ನಡೆದ ಬೀಳ್ಕೊಡು ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ, ವೃತ್ತಿಯಲ್ಲಿರುವವರಿಗೆ 60 ವರ್ಷದ ನಿವೃತ್ತಿಯ ನಂತರ ಪ್ರಭುದ್ಧತೆ ಅನುಭವ ಅಘಾಧವಾಗಿ ಬೆಳೆದಿರುತ್ತದೆ ಎಂದರು.
ಪ್ರೋ ಎಂ ಜಿ ಹೆಗಡೆ ಹಾಗೂ ಪ್ರೋ ಎಂ ಜಿ ನಾಯ್ಕ ಮಾತನಾಡಿ, ಜಿ ಎಲ್ ಹೆಗಡೆ ಸಹಪಾಠಿಗಳಿಗೆ ಪ್ರೇರಕರಾಗಿದ್ದರು. ಇತರರಿಗೆ ಯಕ್ಷಗಾನದ ವೇಷ ಕಟ್ಟಿಸಿದವರು. ನಾಟಕದಲ್ಲಿ ಭಾವಪೂರ್ವ ಪಾತ್ರಗಳನ್ನು ಕಟ್ಟಿ ಬೆಳೆಸಿ ಗಮನ ಸೆಳೆದವರು. ವೃತ್ತಿಯ ಆಚಿನ ಅವರ ಕಲಾತ್ಮಕ ಬದುಕು ಅತಿ ವಿಶಿಷ್ಟವಾದದ್ದು. ಡಾ. ಜಿ ಎಲ್ ಹೆಗಡೆ ಕಾಲೇಜಿನ ಮಾಣಿಕ್ಯವಾಗಿತ್ತು. ಅವರು ಅಪ್ಯಾಯಮಾನ ಸಂಸ್ಕಾರ ನೀಡಿ ಸದಾ ಎಲ್ಲರನ್ನೂ ರಂಜಿಸುತ್ತಿದ್ದರು ಎಂದರು.
ಪ್ರೋ ಪಿ ಕೆ ಭಟ್ಟ, ಪ್ರೋ ಪಿ ಎ ಶೇಟ್, ಪ್ರೋ ವಿ ಆರ್ ಶಾನಭಾಗ, ಪ್ರೋ ವಿದ್ಯಾ ತಲಗೇರಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೀಣಾ ಕಾಮತ, ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಮುರಳಿಧರ ಪ್ರಭು, ಉಪಾಧ್ಯಕ್ಷ ರತ್ನಾಕರ ಕಾಮತ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ ಎಲ್ ಹೆಗಡೆ ಅವರು ಕಷ್ಟವೇ ಮೇಷ್ಟ್ರು ಪರಿಸ್ಥಿತಿ ಅದಾಗಿಯೇ ಪಾಠ ಕಲಿಸುತ್ತದೆ. ಬಾಲ್ಯದಿಂದಲೇ ನನಗೆ ಯಕ್ಷಗಾನದ ಗೀಳು. ಜೀವನದ ಪ್ರತಿಯೊಂದು ಘಟ್ಟದಲ್ಲಿ ಹೊಸ ಅನುಭವ ಕಂಡಿದ್ದೇನೆ. ಕಾಲೇಜಿನಲ್ಲಿ ನಿವೃತ್ತಿಯವರೆಗೂ ಸಹಪಾಠಿಗಳ ಜೊತೆ ಅಣ್ಣ ತಮ್ಮಂದಿರ ಸಂಬಂಧ ಬೆಳೆಸಿಕೊಂಡು ಬಂದಿದ್ದೇನೆ. ಶಿಷ್ಯರ ಪ್ರೀತಿ ಬದುಕುವ ಆಸೆಗೆ ಬಲ ನೀಡುತ್ತಿದೆ ಎಂದರು.
ಪ್ರಾಚಾರ್ಯ ಯು ಜಿ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ ಎಲ್ ವೇಣುಕರ ಪ್ರಾರ್ಥಿ ಸಿದರು. ಪ್ರೋ ಆರ್ ಜಿ ನಾಯ್ಕ ಸ್ವಾಗತಿಸಿದರು. ಗಿರೀಶ ಎಸ್ ನಾಯ್ಕ ನಿರೂಪಿಸಿದರು. ಪ್ರೋ ಎಂ ಜಿ ನಾಯ್ಕ ವಂದಿಸಿದರು.